
ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಶುಕ್ರವಾರ ಸಾವಿಗೀಡಾದ ಕೋಳಿಗಳೊಂದಿಗೆ ಸಾಕಣೆದಾರರದ ಕಮಲಮ್ಮ
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಸುತ್ತಮುತ್ತ ಕೋಳಿಗಳು ಸಾವನ್ನಪ್ಪುತ್ತಿದ್ದು, ಸಾಕಣೆದಾರರಲ್ಲಿ ಆತಂಕ ಮೂಡಿಸಿದೆ. ಹಬ್ಬ ಹಾಗೂ ಜಾತ್ರೆಗಳಲ್ಲಿ ಕೋಳಿಗಳ ಮಾರಾಟ ಮಾಡಲು ತಯಾರಿ ಮಾಡಿಕೊಂಡಿದ್ದ ಸಾಕಣೆದಾರರು ಕೋಳಿಗಳ ದಿಢೀರ್ ಸಾವಿನಿಂದ ಕಂಗಾಲಾಗಿದ್ದಾರೆ. ಸತ್ತ ಕೋಳಿಗಳನ್ನು ಕೆಲವರು ಸೇವನೆ ಮಾಡುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಗ್ರಾಮೀಣ ಪ್ರದೇಶದ ಎಸ್‌ಸಿ, ಎಸ್‌ಟಿ ಸಮುದಾಯಗಳ ಜೀವನೋಪಾಯಕ್ಕೆ ಪಶು ಇಲಾಖೆಯ ಕುಕ್ಕಟ ಅಭಿವೃದ್ಧಿ ನಿಗಮದಿಂದ ಪ್ರತಿ ಕುಟುಂಬಕ್ಕೆ 2 ತಿಂಗಳ 25 ನಾಟಿ ಕೋಳಿ ಮರಿಗಳನ್ನು ವಿತರಿಸಲಾಗಿತ್ತು. ಏಳೆಂಟು ತಿಂಗಳ ನಂತರ ಕೋಳಿಗಳು 2 ಕೆಜಿಯಷ್ಟು ತೂಗುತ್ತಿದ್ದವು. ಕೆಲವರು ಮೈಸೂರು ನಾಟಿ ಕೋಳಿ ಜತೆ ಗಿನಿಕೋಳಿ, ಟರ್ಕಿಕೋಳಿ ಮತ್ತಿತರ ಸ್ಥಳೀಯ ನಾಟಿ ಕೋಳಿಗಳನ್ನು ಸಾಕಣೆ ಮಾಡಿದ್ದು, ಹಬ್ಬಗಳ ಸಂದರ್ಭದಲ್ಲಿ ಮಾರಾಟಕ್ಕೆ ಸಿದ್ಧತೆ ನಡೆಸಿದ್ದರು.
‘ಶುದ್ಧ ನಾಟಿ ಕೋಳಿಗಳನ್ನು ಸಾಕಣೆ ಮಾಡಿದ್ದೆವು. ಉತ್ತಮ ಆಹಾರ ನೀಡಿ ಸ್ವಚ್ಛತೆ ಕಾಪಾಡಿಕೊಂಡಿದ್ದರೂ ಕಳೆದೊಂದು ವಾರದಿಂದ ಪ್ರತಿದಿನ ಕೋಳಿಗಳು ಸಾಯುತ್ತಲೇ ಇವೆ. 30 ಕೋಳಿಗಳಲ್ಲಿ 27 ಕೋಳಿಗಳು ಸತ್ತಿವೆ. ಉಳಿದಿರುವ ಮೂರು ಬದುಕುವ ಸಾಧ್ಯತೆ ಇಲ್ಲವಾಗಿದ್ದು ಸಾವಿರಾರು ರೂಪಾಯಿ ನಷ್ಟವಾಗಿದೆ’ ಎನ್ನುತ್ತಾರೆ ಕಮಲಮ್ಮ.
ಸತ್ತ ಕೋಳಿಗಳನ್ನು ಕೆಲವರು ಮಾಂಸದಡುಗೆ ಮಾಡುತ್ತಿದ್ದಾರೆ. ಕೆಲವರು ಮೃತ ಕೋಳಿಗಳನ್ನು ಕೆರೆ ಹಾಗೂ ಹೊಂಡಗಳಲ್ಲಿ ಬಿಸಾಡುತ್ತಿದ್ದು ಜಲಮೂಲಗಳು ಕಲುಷಿತಗೊಳ್ಳುತ್ತಿವೆ, ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ ಎನ್ನುತ್ತಾರೆ ಸಾರ್ವಜನಿಕರು.
50 ಕೋಳಿ ಸಾವು: ಸ್ಥಳೀಯ ಶುದ್ಧ ನಾಟಿ ಕೋಳಿಗಳಿಗೆ ಪೇಟೆ, ಪಟ್ಟಣಗಳಲ್ಲಿ ಬೇಡಿಕೆ ಇದೆ. ಹಾಗಾಗಿ, ನೂರಕ್ಕೂ ಹೆಚ್ಚು ಕೋಳಿಗಳನ್ನು ಸಾಕಣೆ ಮಾಡಿದ್ದೆವು. ಗಿರಿರಾಜ ಮತ್ತು ಮೊಟ್ಟೆ ಕೋಳಿಗಳನ್ನು ಸ್ಥಳೀಯರು ಬಂದು ಖರೀದಿಸುತ್ತಿದ್ದರು. ಆದರೆ ರೋಗದಿಂದ 50 ಕೋಳಿಗಳು ಸತ್ತಿವೆ. ಜನರು ಕೋಳಿಮಾಂಸ ಮತ್ತು ಮೊಟ್ಟೆ ತಿನ್ನಲು ಹಿಂದೇಟು ಹಾಕುತ್ತಿದ್ದು, ಕುಕ್ಕುಟೋದ್ಯಮ ಸಂಕಷ್ಟಕ್ಕೆ ಸಿಲುಕಿದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ದರಾಜು ಅಳಲು ತೋಡಿಕೊಂಡರು.
ಮಾಂಸ ಸೇವನೆ ಬೇಡ; ಪಶು ವೈದ್ಯಾಧಿಕಾರಿ: ನಾಟಿ ಕೋಳಿಗಳು ಸಾಯುತ್ತಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕೋಳಿಗಳಿಗೆ ಚುಚ್ಚುಮದ್ದು ನೀಡಲಾಗಿದೆ. ಸತ್ತಕೋಳಿಗಳ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ಸಾವಿಗೆ ಕಾರಣ ತಿಳಿಯಲು ವರದಿ ಬರಬೇಕಿದೆ. ಬೇಸಿಗೆಯಲ್ಲಿ ಉಷ್ಣಾಂಶ ಮಟ್ಟ ಏರುಪೇರಿನಿಂದಲೂ ಕೋಳಿಗಳಿಗೆ ಕಾಯಿಲೆ ಉಲ್ಭಣಿಸಿ ಸಾಯುವ ಸಾಧ್ಯತೆ ಇದೆ. ಸತ್ತ ಕೋಳಿಗಳನ್ನು ಸೇವಿಸಬಾರದು, ಇತರೆ ಪ್ರಾಣಿಗಳ ಸಂಪರ್ಕಕ್ಕೆ ಸಿಗದಂತೆ ಆಳವಾಗಿ ಭೂಮಿಯಲ್ಲಿ ಹೂಳಬೇಕು ಎಂದು ಮುಖ್ಯ ತಾಲ್ಲೂಕು ಪಶು ವೈದ್ಯಾಧಿಕಾರಿ (ಆಡಳಿತ) ಎಸ್.ಶಿವರಾಜು ಮಾಹಿತಿ ನೀಡಿದರು.
ಇರಲಿ ಎಚ್ಚರ...
ಕೋಳಿ ಇಲ್ಲವೆ ಹಕ್ಕಿಗಳ ಅಸಹಜ ಸಾವು ಹಾಗೂ ಇತರೆ ರೋಗ ಲಕ್ಷಣಗಳು ಕಂಡುಬಂದರೆ ಪಶು ಆಸ್ಪತ್ರೆಗೆ ತಿಳಿಸಬೇಕು. ಕೋಳಿ ಸಾಕಣೆ ಸ್ಥಳದ ಸ್ವಚ್ಛತೆಗೆ ಒತ್ತು ನೀಡಬೇಕು. ಸಾಕಣೆದಾರರು ಕೋಳಿ ಉಪಚರಿಸಿದ ನಂತರ ಸೋಂಕು ನಿವಾರಕ ಸಾಬೂನು ಬಳಸಬೇಕು.ಮಾಂಸ ಮತ್ತು ಮೊಟ್ಟೆ ತಿನ್ನುವ ಮೊದಲು ಚೆನ್ನಾಗಿ ಬೇಯಿಸಬೇಕು ಎನ್ನುತ್ತಾರೆ ಪಶು ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.