ADVERTISEMENT

ಕೊಳ್ಳೇಗಾಲ | ಹುಡುಗನನ್ನು ಹುಡುಕುವುದಾಗಿ ನಂಬಿಸಿ ಅತ್ಯಾಚಾರ; ದೂರು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 21:22 IST
Last Updated 12 ಡಿಸೆಂಬರ್ 2021, 21:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತೇನೆ ಎಂದು ಹೇಳಿ ನಂಬಿಸಿ ವ್ಯಕ್ತಿಯೊಬ್ಬರು ತನ್ನ ಮೇಳೆ ಅತ್ಯಾಚಾರ ಮಾಡಿ, ಪರಾರಿಯಾಗಿದ್ದಾರೆ ಎಂದು ಯುವತಿಯೊಬ್ಬರು ನಗರದ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದ ಬಡಾವಣೆಯೊಂದರ 24 ವರ್ಷದ ಯುವತಿ ತಾಲ್ಲೂಕಿನ ಹಳೆ ಅಣಗಳ್ಳಿ ಗ್ರಾಮದ ದೊರೆಸ್ವಾಮಿ (37) ಎಂಬುವವರ ವಿರುದ್ಧ ದೂರು ನೀಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾರೆ.

ದೊರೆಸ್ವಾಮಿ ಅವರು ಯುವತಿಯ ತಂದೆ ತಾಯಿ ಅವರನ್ನು ಪರಿಚಯಿಸಿಕೊಂಡು ‘ನಿಮ್ಮ ಮಗಳಿಗೆ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತೇನೆ’ ಎಂದು ಹೇಳಿ ಪರಿಚಯಿಸಿಕೊಂಡಿದ್ದರು. ನಂತರ ಪ್ರತಿನಿತ್ಯ ಆದರ್ಶನಗರ ಬಡಾವಣೆಗೆ ಬಂದು ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದೂರಿನಲ್ಲೇನಿದೆ?: ‘ ಕೆಲವು ದಿನಗಳ ಹಿಂದೆ ನನ್ನನ್ನು ನೋಡಲು ತನ್ನ ಮನೆಗೆ ಹುಡುಗ ಬರುತ್ತಾನೆ ಎಂದು ದೊರೆಸ್ವಾಮಿ ನನ್ನನ್ನು ನಂಬಿಸಿ ಅವರ ಹಳೆ ಅಣಗಳ್ಳಿ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಕೊಟ್ಟ ಪಾನೀಯ ಕುಡಿದಾಗ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ಕೈ ಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿದ್ದರು. ಭಯದಲ್ಲಿದ್ದ ನನ್ನ ಮೇಲೆ ದೊರೆಸ್ವಾಮಿ ಅತ್ಯಾಚಾರ ಎಸಗಿದ್ದರು.ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನನ್ನ ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿದ್ದರು’ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

‘ಆ ಬಳಿಕವೂ ಬೇರೆ ಹುಡುಗನ ಜೊತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ, ನನ್ನನ್ನು ಬೆದರಿಸಿ ಆಗಾಗ ಅತ್ಯಾಚಾರ ಮಾಡುತ್ತಿದ್ದರು. 17 ದಿನಗಳ ಹಿಂದೆಯಷ್ಟೇ ಮುಡಿಗುಂಡ ದೇವಸ್ಥಾನವೊಂದರಲ್ಲಿ ನನಗೆ ದೊರೆಸ್ವಾಮಿ ಅವರು ತಾಳಿಕಟ್ಟಿದ್ದಾರೆ. ಕೊಳ್ಳೇಗಾಲದಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿಕೊಂಡು ಮತ್ತೆ ಬೇರೆ ಹುಡುಗನ ಜೊತೆ ಮದುವೆ ಮಾಡುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದಾರೆ’ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.