ಕೊಳ್ಳೇಗಾಲ: ‘ಯುವ ಜನರು ಸ್ವಯಂ ಶಿಸ್ತು ಜವಾಬ್ದಾರಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಂತಹ ಗುಣ ಅಳವಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಹೇಳಿದರು.
ನಗರದ ಮುಡಿಗುಂಡ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಇವರ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಯುವ ಪೀಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿ ಸಮಾಜ ಮುನ್ನಡೆಸಬೇಕು. ಈ ದೇಶವನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು. ವಿವೇಕಾನಂದರ ಬೋಧನೆಗಳನ್ನು ಪ್ರತಿಬಿಂಬಿಸುವ ಮೂಲಕ, ರಾಷ್ಟ್ರ ನಿರ್ಮಾಣ, ಸಾಮಾಜಿಕ ಪ್ರಗತಿ ಮತ್ತು ಜಾಗತಿಕ ಶಾಂತಿಯಲ್ಲಿ ಯುವಕರ ಮಹತ್ವವನ್ನು ಈ ದಿನ ಒತ್ತಿ ಹೇಳುತ್ತದೆ. ಹಿಂದೂ ಧರ್ಮದ ಪುನರುಜ್ಜೀವನಕ್ಕೆ ನೀಡಿದ ಕೊಡುಗೆಗಳು ಮತ್ತು ಸಾರ್ವತ್ರಿಕ ಸಹೋದರತ್ವಕ್ಕಾಗಿ ಸ್ವಾಮಿ ವಿವೇಕಾನಂದರರು ಹೆಸರು ವಾಸಿ’ಎಂದರು.
‘1985ರಲ್ಲಿ, ಸರ್ಕಾರವು ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವೆಂದು ಸ್ಥಾಪಿಸುವ ಮೂಲಕ ವಿವೇಕಾನಂದರ ದೃಷ್ಟಿಕೋನ ಮತ್ತು ದೇಶದ ಭವಿಷ್ಯ ನಿರ್ಧರಿಸುವಲ್ಲಿ ಯುವಕರ ಮಹತ್ವದ ಬಗ್ಗೆ ಅವರ ಕಾರ್ಯವನ್ನು ಗೌರವಿಸಿತು. ಅಂದಿನಿಂದ ಈ ದಿನ ಶಿಕ್ಷಣ ಸಂಸ್ಥೆಗಳಲ್ಲಿ ಯುವಜನರನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಚರ್ಚೆಗಳು, ಕಾರ್ಯಾಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಚಾರ ಸಂಕಿರಣಗಳು ನಡೆಯುತ್ತವೆ’ ಎಂದರು.
ಹಿರಿಯ ವಕೀಲೆ ನಿರ್ಮಲ ಮಧುಸೂದನ್ ಮಾತನಾಡಿ, ‘ಪ್ರತಿ ವರ್ಷ ಯುವ ಜನರ ಮೇಲೆ ಪರಿಣಾಮ ಬೀರುವ, ಪ್ರಮುಖ ಸಮಸ್ಯೆ ಎತ್ತಿ ತೋರಿಸುವ ಗುರಿ ಹೊಂದಿರುವ ಥೀಮ್‌ನೊಂದಿಗೆ ರಾಷ್ಟ್ರೀಯ ಯುವ ದಿನವನ್ನು ಸ್ಮರಿಸಲಾಗುತ್ತದೆ. ರಾಷ್ಟ್ರೀಯ ಯುವ ದಿನ 2025ರ ಥೀಮ್, ‘ಸುಸ್ಥಿರ ಭವಿಷ್ಯಕ್ಕಾಗಿ ಯುವಕರು ಸ್ಥಿತಿ ಸ್ಥಾಪಕತ್ವ ಮತ್ತು ಜವಾಬ್ದಾರಿಯೊಂದಿಗೆ ರಾಷ್ಟ್ರವನ್ನು ರೂಪಿಸುವುದುʼ ಎಂಬುದಾಗಿದೆ. ಈ ಥೀಮ್ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯುವಕರ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದು ನಾವೀನ್ಯತೆ ಬೆಳೆಸುವಲ್ಲಿ ಮತ್ತು ಸಮಾಜವನ್ನು ಮುನ್ನಡೆಸುವಲ್ಲಿ ಯುವಕರ ಪಾತ್ರ ಒತ್ತಿಹೇಳುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀತಾ, ವಕೀಲರ ಸಂಘದ ಉಪಾಧ್ಯಕ್ಷ ಸಿ.ಆರ್. ನಿರ್ಮಲ, ಕಾರ್ಯದರ್ಶಿ ಸಿ.ಬಿ ಮಹೇಶ್ ಕುಮಾರ್, ಖಜಾಂಚಿ ರೋಹಿತ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಮುರಳಿಧರ.ಎಂ.ಎನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.