ADVERTISEMENT

ಮಲೇರಿಯ ನಿರ್ಮೂಲನೆಗೆ ಶ್ರಮಿಸಿ: ಸಿಇಒ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 17:22 IST
Last Updated 17 ಜೂನ್ 2021, 17:22 IST
ಮಲೇರಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಿಇಒ ಅವರು ಅಧಿಕಾರಿಗಳ ಸಭೆ ನಡೆಸಿದರು
ಮಲೇರಿಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿ.ಪಂ. ಸಿಇಒ ಅವರು ಅಧಿಕಾರಿಗಳ ಸಭೆ ನಡೆಸಿದರು   

ಚಾಮರಾಜನಗರ: ವಿವಿಧ ಇಲಾಖೆಗಳ ಸಹಕಾರ ಹಾಗೂ ಸಹಭಾಗಿತ್ವದಿಂದ ಜಿಲ್ಲೆಯಲ್ಲಿ ಮಲೇರಿಯ ಜ್ವರವನ್ನು ನಿರ್ಮೂಲನೆ ಮಾಡಲು ಶ್ರಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್ ಭೋಯರ್ ನಾರಾಯಣ ರಾವ್ ಅವರು ಗುರುವಾರ ಸೂಚಿಸಿದರು.

ಮಲೇರಿಯ ರೋಗ ನಿಯಂತ್ರಣ ಮತ್ತು ಮಲೇರಿಯ ವಿರೋಧಿ ಮಾಸಾಚಾರಣೆ ಕುರಿತ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸೊಳ್ಳೆಗಳಿಂದ ಹರಡುವ ಮಲೇರಿಯ ನಿಯಂತ್ರಿಸಲು ಹಲವು ಇಲಾಖೆಗಳ ಪಾತ್ರ ಮಹತ್ವದಾಗಿದೆ. ಸ್ವಾಭಾವಿಕ ನೀರಿನ ತಾಣಗಳಾದ ಕೆರೆ, ಬಾವಿ, ಕಾಲುವೆ, ಹೊಂಡಗಳು ಮತ್ತಿತ್ತರ ಕಡೆಗಳಲ್ಲಿ ಇರುವ ಸೊಳ್ಳೆಗಳಿಂದ ಇದು ಹರಡುತ್ತದೆ. ಹೀಗಾಗಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ’ ಎಂದರು.

‘ನಗರ, ಪಟ್ಟಣ, ಗ್ರಾಮ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆ, ಕಸ ವಿಲೇವಾರಿಗೆ ಗಮನ ನೀಡಬೇಕು. ಆರೋಗ್ಯ ಇಲಾಖೆ ಮೊದಲ ಮತ್ತು ಮೂರನೇ ಶುಕ್ರವಾರ ಕೈಗೊಳ್ಳಲಿರುವ ಈಡಿಸ್ ಲಾರ್ವ ಸರ್ವೆ ಮತ್ತು ಲಾರ್ವನಾಶ ಪ್ರಕ್ರಿಯೆಗೆ ಸ್ಥಳೀಯ ಸಂಸ್ಥೆಗಳ ಆಡಳಿತಗಳು ಸಹಕಾರ ನೀಡಬೇಕು. ಸೊಳ್ಳೆ ನಿಯಂತ್ರಣ ಸಲುವಾಗಿ ಮೀನುಗಾರಿಕೆ ಇಲಾಖೆಯು ಲಾರ್ವಗಳನ್ನು ತಿನ್ನುವ ಮೀನುಗಳನ್ನು ಬಿಡಲು ಕ್ರಮ ತೆಗೆದುಕೊಳ್ಳಬೇಕು’ ಎಂದರು.

ADVERTISEMENT

‘ಅಂಗನವಾಡಿ, ಹಾಸ್ಟೆಲ್‌ಗಳಲ್ಲಿ ಕಿಟಕಿಗಳಿಗೆ ಸೊಳ್ಳೆ ಪರದೆ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಬೇಕು. ಸೊಳ್ಳೆ ಪರದೆಗಳ ವಿತರಣೆಗೆ ಮುಂದಾಗಬೇಕು. ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಡಾ. ಕಾಂತರಾಜು, ಡಾ.ನಾಗರಾಜು, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಗೋಪಾಲ್, ಡಾ.ಮಂಜುನಾಥ್, ಡಾ. ಶ್ರೀನಿವಾಸ್, ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾಗೀರಥಿ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಎಸ್.ಜವರೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.