ADVERTISEMENT

ಅಂಕಣಗೊಂದಿಯಲ್ಲಿ ಸಾಂಕ್ರಾಮಿಕ ರೋಗ ಭೀತಿ

ಅವೈಜ್ಞಾನಿಕ ಕಾಮಗಾರಿಯಿಂದ ತುಂಬಿ ನಿಲ್ಲುತ್ತಿರುವ ಚರಂಡಿಗಳು, ಮಳೆ ಸುರಿದರೆ ಮನೆಗಳಲ್ಲಿ ಹುಳುಗಳ ಹರಿದಾಟ, ದುರ್ವಾಸನೆಗೆ ರೋಸಿ ಹೋದ ಜನರು

ಈರಪ್ಪ ಹಳಕಟ್ಟಿ
Published 2 ಏಪ್ರಿಲ್ 2018, 7:34 IST
Last Updated 2 ಏಪ್ರಿಲ್ 2018, 7:34 IST
ಮಡುಗಟ್ಟಿ ನಿಂತ ಚರಂಡಿ ಸೇರಿದ ವಿವಿಧ ಬಗೆಯ ತ್ಯಾಜ್ಯ
ಮಡುಗಟ್ಟಿ ನಿಂತ ಚರಂಡಿ ಸೇರಿದ ವಿವಿಧ ಬಗೆಯ ತ್ಯಾಜ್ಯ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಂಕಣಗೊಂದಿಯಲ್ಲಿ ವೆಂಕಟರಮಣ ಸ್ವಾಮಿ ಮತ್ತು ಗಂಗಮ್ಮ ದೇವಾಲಯಗಳ ಸುತ್ತಮುತ್ತ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳು ಕೊಚ್ಚೆ ನೀರು, ತ್ಯಾಜ್ಯದಿಂದ ವರ್ಷವೀಡಿ ಮಡುಗಟ್ಟಿ ನಿಂತು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮೂಡಿಸುತ್ತಿವೆ.ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ಊರಿನಲ್ಲಿ ಸದ್ಯ ಹದಗೆಟ್ಟ ಚರಂಡಿಗಳಿಂದಾಗಿ ಸ್ವಚ್ಛತೆ ಮರೀಚಿಕೆಯಾಗಿದೆ. ವರ್ಷಗಟ್ಟಲೇ ಈ ಚರಂಡಿಗಳನ್ನು ಸ್ವಚ್ಛಗೊಳಿಸುವುದೇ ಇಲ್ಲ. ಹೀಗಾಗಿ ಸಮಸ್ಯೆ ಎನ್ನುವುದು ಸ್ಥಳೀಯರಿಗೆ ಕಾಯಂ ಅತಿಥಿಯಂತಾಗಿದ್ದು, ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

‘ಊರಿನ ಮೇಲ್ಭಾಗದ ಪ್ರದೇಶದ ಮತ್ತು ಊರಲ್ಲಿರುವ ನೀರಿನ ಟ್ಯಾಂಕ್‌ಗಳಿಂದ ಹರಿಯುವ ನೀರೆಲ್ಲ ಹರಿದು ಬಂದು ವೆಂಕಟರಮಣ ಸ್ವಾಮಿ ಮತ್ತು ಗಂಗಮ್ಮ ದೇವಾಲಯಗಳ ಸುತ್ತಮುತ್ತ ಪ್ರದೇಶದಲ್ಲಿರುವ ಚರಂಡಿಗಳಲ್ಲಿ ಮಡುಗಟ್ಟಿ ನಿಲ್ಲುತ್ತದೆ. ಅನೇಕ ಬಾರಿ ಚರಂಡಿಗಳು ತುಂಬಿ ಕೊಚ್ಚೆ ನೀರು ರಸ್ತೆಗಳ ಮೇಲೆ ಹರಿಯುತ್ತದೆ’ ಎಂದು ಸ್ಥಳೀಯ ನಿವಾಸಿ ಪ್ರವೀಣ್ ಅಳಲು ತೋಡಿಕೊಂಡರು.

‘ಮಳೆಗಾಲದಲ್ಲಿ ಚರಂಡಿ ನೀರು ಮನೆಗಳಿಗೆ ನುಗ್ಗಿ, ಮನೆಗಳಲ್ಲಿ ಹುಳುಗಳು ಹರಿದಾಡುತ್ತವೆ. ಕಳೆದ ಆರು ತಿಂಗಳಿಂದ ಇಲ್ಲಿನ ಜನರು ಇದರಿಂದಾಗಿ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಾರಣಾಂತಿಕ ಕಾಯಿಲೆ ಹರಡುವ ಮುನ್ನ ಸಂಬಂಧಪಟ್ಟವರು ಇತ್ತ ಗಮನ ಹರಿಸಲಿ’ ಎಂದು ಆಗ್ರಹಿಸಿದರು.

ADVERTISEMENT

‘ಮೊದಲೇ ಚರಂಡಿ ಸರಿಯಾಗಿ ನಿರ್ಮಿಸದೆ ಸಮಸ್ಯೆ ತಂದಿಡಲಾಗಿದೆ. ಇಲ್ಲಿ ಪರಿಸ್ಥಿತಿ ಹದಗೆಟ್ಟರೂ ಕನಿಷ್ಠ ಸ್ವಚ್ಛತೆ ಬಗ್ಗೆ ಕೂಡ ಅಧಿಕಾರಿಗಳು ಗಮನ ಹರಿಸುವುದಿಲ್ಲ. ವರ್ಷಕ್ಕೊಂದು ಬಾರಿ ಚರಂಡಿ ಸ್ವಚ್ಛಗೊಳಿಸಿದರೆ ಅದು ನಮ್ಮ ಪುಣ್ಯ. ಇತ್ತ ಯಾರೂ ಕಣ್ಣು ಹಾಯಿಸುವುದೇ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕೆಲಸ ಮಾಡುತ್ತೇನೆ. ಸಂಜೆ ವೇಳೆ ಸೊಳ್ಳೆ ಕಾಟಕ್ಕೆ ಘಟಕದಲ್ಲಿ ಕುಳಿತುಕೊಳ್ಳಲು ಆಗುವುದಿಲ್ಲ’ ಎಂದು ಸ್ಥಳೀಯ ನಿವಾಸಿ ವಸಂತ್ ಬೇಸರ ವ್ಯಕ್ತಪಡಿಸಿದರು.

‘ತುಂಬಿಕೊಂಡು ನಿಂತ ಚರಂಡಿಯಲ್ಲಿ ಕೊಚ್ಚೆ ನೀರಿನ ಜತೆಗೆ ವಿವಿಧ ಬಗೆಯ ತ್ಯಾಜ್ಯ ಸೇರಿಕೊಂಡು ಕೊಳೆತು ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಚಿಕ್ಕ ಮಕ್ಕಳನ್ನು ಮನೆಯಿಂದ ಹೊರ ಬಿಡಲು ಜನರು ಭಯ ಬೀಳುವಂತಾಗಿದೆ. ಆರೋಗ್ಯ ಇಲಾಖೆಯವರಂತೂ ತಮ್ಮ ಕರ್ತವ್ಯವನ್ನೇ ಮರೆತಿದ್ದಾರೆ. ಸ್ವಚ್ಛ ಭಾರತ ಎಂದು ಭಾಷಣ ಮಾಡುವವರೆಲ್ಲ ಒಮ್ಮೆ ನಮ್ಮೂರಿಗೆ ಭೇಟಿ ನೀಡಬೇಕಿದೆ’ ಎಂದು ತಿಳಿಸಿದರು.

ಈ ಕುರಿತು ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎಂ.ಮಮತಾ ಅವರನ್ನು ವಿಚಾರಿಸಿದರೆ, ‘ಇದು ಈಗ ಸೃಷ್ಟಿಯಾಗಿರುವ ಸಮಸ್ಯೆ ಅಲ್ಲ. ಬಹಳ ಹಿಂದಿನಿಂದ ಇದೆ. ಈ ಹಿಂದೆ ಚರಂಡಿ ನಿರ್ಮಿಸುವಾಗ ನೀರು ಸರಾಗವಾಗಿ ಹರಿದು ಹೋಗುವಂತೆ ನಿರ್ಮಿಸಿಲ್ಲ. ಹೀಗಾಗಿ ಎತ್ತರದ ಪ್ರದೇಶದ ನೀರೆಲ್ಲ ಬಂದು ಒಂದೆಡೆ ನಿಂತು ಅನೇಕ ಮನೆಗಳಿಗೆ ಸಮಸ್ಯೆ ಸೃಷ್ಟಿಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಹೇಳಿದರು. ‘ನರೇಗಾ ಯೋಜನೆಯಡಿ ಚರಂಡಿ ಸರಿಪಡಿಸುವ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಿದ್ದೆವು. ಆದರೆ ಇದೀಗ ಅಲ್ಲಿಯೇ ಸಮೀಪದಲ್ಲಿ ನರ್ಬಾಡ್‌ ರಸ್ತೆ ನಿರ್ಮಾಣವಾಗುತ್ತಿದ್ದು, ಅದಕ್ಕೆ ಎರಡು ಬದಿ ಚರಂಡಿ ನಿರ್ಮಿಸಲಾಗುತ್ತದೆ. ಆ ಚರಂಡಿ ಸಮಸ್ಯೆ ಇರುವ ಸ್ಥಳದಿಂದ ಚರಂಡಿ ಸಂಪರ್ಕ ಕಲ್ಪಿಸುತ್ತೇವೆ. ಆಗ ಸಮಸ್ಯೆ ಬಗೆಹರಿಯುತ್ತದೆ’ ಹೇಳಿದರು.

**

ಅಧ್ವಾನಗೊಂಡ ಚರಂಡಿಗಳಿಂದ ಜನ ಮನೆ ಹೊರಗಡೆ ಕುಳಿತುಕೊಳ್ಳಲು ಆಗುತ್ತಿಲ್ಲ. ದುರ್ವಾಸನೆ ಜತೆಗೆ ಸೊಳ್ಳೆ ಕಾಟಕ್ಕೆ ಜನರು ಬಾಗಿಲು ತೆರೆಯಲು ಅಂಜುವಂತಾಗಿದೆ – ಪ್ರವೀಣ್, ಸ್ಥಳೀಯ ನಿವಾಸಿ

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.