ADVERTISEMENT

ಅಭಿವೃದ್ಧಿಗೆ ₹ 1200 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 6:31 IST
Last Updated 15 ಏಪ್ರಿಲ್ 2018, 6:31 IST

ಗುಡಿಬಂಡೆ: ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷ ತೋರಿಸಿ ನಂತರ ಪರಾರಿಯಾಗುವ ಅಭ್ಯರ್ಥಿಗಳಿಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕು ಎಂದು ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಮನವಿ ಮಾಡಿದರು.

ಪಟ್ಟಣದಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದರು. 'ಗುಡಿಬಂಡೆ ಮತ್ತು ಬಾಗೇಪಲ್ಲಿ ತಾಲ್ಲೂಕು ಅಭಿವೃದ್ಧಿಗೆ ₹ 1200 ಕೋಟಿ ಅನುದಾನ ತಂದಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ನನ್ನದು ಅಭಿವೃದ್ಧಿ ರಾಜಕೀಯವೇ ಹೊರತು ಕೀಳುಮಟ್ಟದ ಆಮಿಷದ ರಾಜಕೀಯವಲ್ಲ’ ಎಂದು ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಅಶ್ವಾಸನೆ ನೀಡುವ ಅಭ್ಯರ್ಥಿ ಗಳು ಇಷ್ಟು ದಿನ ಎಲ್ಲಿದ್ದರು? ಚುನಾವಣೆ ಬಂದಾಗ ಅವರಿಗೆ ಕ್ಷೇತ್ರದ ಜನರು ನೆನಪಾಗುತ್ತಾರೆ. ಇಲ್ಲಿನ ಜನರ ಬಡತನ ಮೂಲ ಸಮಸ್ಯೆ ಅರಿವೇ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪುಸ್ತಕ ಬಿಡುಗಡೆ: ಇದೇ ಸಂದರ್ಭದಲ್ಲಿ ಸಮಗ್ರ ಅಭಿವೃದ್ದಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಧನೆಯ ಹೆಜ್ಜೆ ಗುರುತು ಪುಸ್ತಕ ಬಿಡುಗಡೆ ಮಾಡಿದರು.

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದಲ್ಲೂ ಮೂಲಸೌಲಭ್ಯ ಅಭಿವೃದ್ಧಿ ಕೆಲಸ ಮಾಡಲಾಗಿದೆ. ನನ್ನ ಅವಧಿಯಲ್ಲಿ ₹ 1200 ಕೋಟಿ ಅನುದಾನ ಕ್ಷೇತ್ರಕ್ಕೆ ಮಂಜೂರಾಗಿದ್ದು, ಅದೆಲ್ಲವನ್ನೂ ಸಮರ್ಪಕವಾಗಿ ಸದ್ಬಳಕೆ ಮಾಡಿದ್ದೇನೆ’ ಎಂದು ಸುಬ್ಬಾರೆಡ್ಡಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪಾವಜೇನಹಳ್ಳಿ ನಾಗರಾಜ್ ರೆಡ್ಡಿ, ರಮೇಶ್, ಚಾಂದ್ ಪಾಷಾ, ಬಡ್ಡು, ಅಂಬರೀಷ್. ಆಜಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.