ADVERTISEMENT

ಅಭ್ಯರ್ಥಿಗಳ ಪತ್ನಿಯರ ಮತಯಾಚನೆ

ಬಿರು ಬಿಸಿಲಿನಲ್ಲಿ ಹಳ್ಳಿಗಳಲ್ಲಿ ಸುತ್ತಾಟ; ಮನೆ ಮನೆಗೆ ಭೇಟಿ ನೀಡಿ ಮತದಾರರ ಓಲೈಕೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 7 ಮೇ 2018, 8:44 IST
Last Updated 7 ಮೇ 2018, 8:44 IST

ಶಿಡ್ಲಘಟ್ಟ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಅಭ್ಯರ್ಥಿಗಳ ಪರವಾಗಿ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರು ಅಖಾಡಕ್ಕಿಳಿದು ಮತಯಾಚನೆ ಮಾಡುತ್ತಿದ್ದಾರೆ.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್‌ ಅವರ ಪತ್ನಿ ಪ್ರೇಮಾ ರವಿಕುಮಾರ್‌ ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಮತ ಯಾಚಿಸುತ್ತಿದ್ದಾರೆ. ಇತ್ತ ಅಂತಿಮ ಕ್ಷಣದಲ್ಲಿ ಜೆಡಿಎಸ್ ಟಿಕೆಟ್ ತಪ್ಪಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಶಾಸಕ ಎಂ.ರಾಜಣ್ಣ ಪರ ಅವರ ಪತ್ನಿ ಶಿವಲೀಲಾ ರಾಜಣ್ಣ ನಗರದ ಪ್ರಮುಖ ವಾರ್ಡ್‌ಗಳಲ್ಲಿ ಭಾನುವಾರ ಮತ ಯಾಚಿಸಿದರು.

ಪಕ್ಷದ ಕಾರ್ಯಕರ್ತರು ಸೇರಿದಂತೆ ಕುಟುಂಬ ಸದಸ್ಯರ ಜೊತೆಗೂಡಿ ಮತಯಾಚನೆ ನಡೆಸುತ್ತಿರುವರು. ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಕಟ್ಟಿ ಬೆಳೆಸುವಲ್ಲಿ ರವಿಕುಮಾರ್‌ ಪಾತ್ರ ದೊಡ್ಡದು. ಅಲ್ಲದೆ ಕಳೆದ ಚುನಾವಣೆಯಲ್ಲಿ ಎಂ.ರಾಜಣ್ಣ ಅವರ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಟ್ರಸ್ಟ್‌ ಸ್ಥಾಪಿಸಿ ಅದರ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಪ್ರೇಮಾ ರವಿಕುಮಾರ್‌ ತಮ್ಮ ಪತಿ ಮತ ನೀಡುವಂತೆ ಜನರೆದುರು ಬೇಡಿಕೊಳ್ಳುತ್ತಿದ್ದಾರೆ.

ADVERTISEMENT

ಶಾಸಕ ಎಂ.ರಾಜಣ್ಣ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸ, ಜನಪರ ಕಾಳಜಿ ಮತ್ತು ಪಕ್ಷಸ ಸಂಘಟನೆಯ ಬಲವರ್ಧನೆ ಗುರುತಿಸಿ ಮತ ಹಾಕುವಂತೆ ಶಿವಲೀಲಾ ತಮ್ಮ ಪತಿಗೇ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.

ರಣಬಿಸಿಲನ್ನೂ ಲೆಕ್ಕಿಸದೆ ಮನೆ ಮನೆಗೆ, ಓಣಿ ಓಣಿ ಸುತ್ತಿ ಮತ ಕೇಳುವುದನ್ನು ಕ್ಷೇತ್ರದ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಅಲ್ಲದೇ ಬಂದವರನ್ನು ಪ್ರೀತಿ, ಗೌರವದಿಂದ ಉಪಚರಿಸಿ, ಅರಿಸಿನ ಕುಂಕುಮ ನೀಡಿ ಕಳುಹಿಸುತ್ತಿದ್ದಾರೆ. ಕೆಲವೆಡೆ ಅಭ್ಯರ್ಥಿಗಳ ಪತ್ನಿಯರನ್ನು ನೋಡಲು ಮಹಿಳೆಯರು ಗುಂಪುಗೂಡಿ ಸೇರುವುದು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.