ADVERTISEMENT

ಅವಹೇಳನಕಾರಿ ಟೀಕೆ; ಪ್ರಕರಣ ದಾಖಲಿಸುವ ಎಚ್ಚರಿಕೆ

ಚುನಾವಣಾ ಮಾಹಿತಿ ಕುರಿತ ಸಭೆಯಲ್ಲಿ ಅಧಿಕಾರಿ ಜಗದೀಶ್ ಗಂಗಣ್ಣನವರ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 7:01 IST
Last Updated 5 ಏಪ್ರಿಲ್ 2018, 7:01 IST

ಬಾಗೇಪಲ್ಲಿ: ರಾಜಕೀಯ ವೇದಿಕೆ ಕಾರ್ಯಕ್ರಮಗಳಲ್ಲಿ ಇನ್ನೊಬ್ಬ ಅಭ್ಯರ್ಥಿಯ ಬಗ್ಗೆ ವೈಯಕ್ತಿಕ ಟೀಕೆ, ಅವಹೇಳನಕಾರಿ ಮಾತುಗಳು ಸಹ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಮುಖಂಡರು ಎಚ್ಚರಿಕೆಯಿಂದ ಭಾಷಣ ಮಾಡಬೇಕು. ಇಲ್ಲದಿದ್ದರೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಚುನಾ ವಣಾಧಿಕಾರಿ ಜಗದೀಶ್ ಗಂಗಣ್ಣನವರ್ ಎಚ್ಚರಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ 2018ರ ಚುನಾವಣಾ ಮಾಹಿತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ, ಧರ್ಮ, ಭಾಷೆ, ಜನಾಂಗಗಳ ನಡುವೆ ಜಗಳ ಉಂಟುಮಾಡುವ, ಪ್ರಚೋದನೆಗೆ ಗುರಿ ಮಾಡುವ ಭಾಷಣ ಸಹ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ. ರಾಜಕೀಯ ಮುಖಂಡರ ಭಾಷಣಗಳು ಕೇವಲ ಪಕ್ಷದ ಟೀಕೆ, ಟಿಪ್ಪಣಿಗಳಿಗೆ ಮಾತ್ರ ಸೀಮಿತವಾಗಿರಬೇಕು. ವ್ಯಕ್ತಿ ಹಾಗೂ ಅಭ್ಯರ್ಥಿಯ ವೈಯಕ್ತಿಕ ಟೀಕೆಗಳಿಗೆ ಗುರಿಯಾಗಬಾರದು ಎಂದು ಹೇಳಿದರು.ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭ, ವಿಶೇಷ ಜಾತ್ರೆಗಳು, ರ‍್ಯಾಲಿ, ದೇವಾಲಯಗಳ ಜೀರ್ಣೋದ್ಧಾರ ಹಾಗೂ ಇತರ ಕಾರ್ಯಕ್ರಮಗಳ ಹೆಸರಿನಲ್ಲಿ ಊಟದ ವ್ಯವಸ್ಥೆ ಮಾಡಬಾರದು. ಕಾರ್ಯಕ್ರಮ ನಡೆಸಲು ಮುಂಚಿತವಾಗಿಯೇ ಚುನಾವಣಾ ಅಯೋಗದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದರು.ವಿಧಾನಸಭಾ ಕ್ಷೇತ್ರದಲ್ಲಿ 1,94,764 ಮತದಾರರು ಇದ್ದಾರೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 201, ಗುಡಿಬಂಡೆ 53  ಮತಗಟ್ಟೆ ಸ್ಥಾಪಿಸಲಾಗುವುದು. ಈ ಬಾರಿ ವಿಶೇಷವಾಗಿ ಬಾಗೇಪಲ್ಲಿಯಲ್ಲಿ 4, ಗುಡಿಬಂಡೆಯಲ್ಲಿ 2 ಗುಲಾಬಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿಗಳ ತಂಡದವರು ಇರುತ್ತಾರೆ ಎಂದರು.

ದೂರಿಗೆ ಕರೆ ಮಾಡಿ

ADVERTISEMENT

5 ಸೆಕ್ಟರ್ ಅಧಿಕಾರಿಗಳು, 3 ಪ್ಲೈಯಿಂಗ್ ಸ್ಕ್ಯಾಡ್ ತಂಡಗಳು, 6 ಚೆಕ್ ಪೋಸ್ಟ್ ತೆರೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಬಾಗೇಪಲ್ಲಿ- 08150-282225, ಗುಡಿಬಂಡೆ 08156–261250 ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಜಗದೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.