ADVERTISEMENT

ಅವ್ಯವಹಾರ ನ್ಯಾಯಾಂಗ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2017, 8:43 IST
Last Updated 17 ಡಿಸೆಂಬರ್ 2017, 8:43 IST
ಚಿಕ್ಕಬಳ್ಳಾಪುರ ನಗರಸಭೆ ಎದುರು ಶನಿವಾರ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಚಿಕ್ಕಬಳ್ಳಾಪುರ ನಗರಸಭೆ ಎದುರು ಶನಿವಾರ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಚಿಕ್ಕಬಳ್ಳಾಪುರ: ನಗರಸಭೆ ನಕಲಿ ಖಾತೆ ವಂಚನೆ ಜಾಲದಲ್ಲಿ ಭಾಗಿಯಾಗಿರುವ ಸದಸ್ಯರನ್ನು ಕೂಡಲೇ ಅನರ್ಹಗೊಳಿಸಬೇಕು. ನಗರಸಭೆಯನ್ನು ಸೂಪರ್‌ಸೀಡ್‌ ಮಾಡುವ ಜತೆಗೆ ಆಡಳಿತಾಧಿಕಾರಿಯನ್ನು ನೇಮಿಸಿ, ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರು ಶನಿವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.

ಮುಖಂಡ ಕೆ.ಪಿ ಬಚ್ಚೇಗೌಡ ಮಾತನಾಡಿ, ‘ಅಕ್ರಮಗಳ ಕುರಿತು ತನಿಖೆ ಮಾಡಲು ನಗರಸಭೆಯನ್ನು ಕೂಡಲೇ ಅಮಾನತಿನಲ್ಲಿ ಇಡಬೇಕು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರಬೀಳುತ್ತದೆ. ಇವತ್ತು ನಗರಸಭೆಯ ಅಧಿಕಾರಿಗಳು ಮತ್ತು ಸದಸ್ಯರ ಕಾರ್ಯವೈಖರಿ ಸಾರ್ವಜನಿಕರು ತಲೆ ತಗ್ಗಿಸುವಂತಿದೆ’ ಎಂದು ಹೇಳಿದರು.

‘ನಕಲಿ ಖಾತೆ ವಂಚನೆ ಪ್ರಕರಣದಲ್ಲಿ ಶಾಸಕರ ಹಿಂಬಾಲಕರಾಗಿರುವ ಸದಸ್ಯರು ಭಾಗಿಯಾಗಿದ್ದಾರೆ. ನಗರಸಭೆಯಲ್ಲಿ ಒಂದು ಖಾತೆ ಮಾಡಿಕೊಡಲು ₹ 40 ರಿಂದ 60 ಸಾವಿರ ಹಣ ಪಡೆಯಲಾಗುತ್ತಿದೆ. ಇದಕ್ಕೆಲ್ಲಾ ಯಾರು ಸೂತ್ರದಾರರು ಎಂಬುದು ಎಲ್ಲರಿಗೂ ಗೋತ್ತಿದೆ. ಆದರೆ ಈ ಬಗ್ಗೆ ಯಾರೂ ಬಾಯಿ ಬಿಡುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಕೈಗೊಂಬೆಯಾಗಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ‘ನಗರದ ರಸ್ತೆ, ಚರಂಡಿ, ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ನಗರಸಭೆ ಇವತ್ತು ನರಕಸಭೆ ಆಗಿದೆ. ತಪ್ಪಿತಸ್ಥ ಅಧಿಕಾರಿಗಳು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಸದಸ್ಯರು ಪೊಲೀಸರ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಪೇರೆಸಂದ್ರ ಹೋಬಳಿಯ ಆರು ಪಂಚಾಯಿತಿಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ’ ಎಂದು ದೂರಿದರು.

‘ಸ್ವಂತ ಆಸ್ತಿಗಳಿಗೆ ಖಾತೆ ಮಾಡಿಸಿಕೊಳ್ಳಲು ಬರುವ ನಾಗರಿಕರಿಂದ ಮನಸೋಇಚ್ಛೆ ಸುಲಿಗೆ ಮಾಡಲಾಗುತ್ತಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕೂಡ ಜನರಿಂದ ಲಕ್ಷಗಟ್ಟಲೇ ಹಣ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಕೂಲಂಕುಷವಾಗಿ ನ್ಯಾಯಾಂಗ ತನಿಖೆ ನಡೆಯಲಿ. ಆಗ ಮಾತ್ರ ನಗರಸಭೆ ಸ್ವಚ್ಛಗೊಳ್ಳುತ್ತದೆ’ಎಂದರು.

ಮುಖಂಡ ನಾರಾಯಣಸ್ವಾಮಿ ಮಾತನಾಡಿ, ‘ನಗರಸಭೆ ಸದಸ್ಯ ಗಜೇಂದ್ರ ಸೇರಿದಂತೆ ಕೆಲವರು ನಗರದ ಗಂಗನಮಿದ್ದೆ ರಸ್ತೆಯಲ್ಲಿ ವಿವಾದಿತ ಎರಡೂವರೆ ಎಕರೆ ಜಮೀನಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದರೂ ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ಜನರು ಅಂತಹ ಜಮೀನು ಕೊಂಡು ಮೋಸ ಹೋಗಬಾರದು’ ಎಂದು ಹೇಳಿದರು.

‘ನಗರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಲ್ಲದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಭೆಯತ್ತ ಗಮನ ಹರಿಸಬೇಕಿತ್ತು. ಆದರೆ ಅವರು ಮೌನವಹಿಸಿದ್ದಾರೆ. ನಗರಸಭೆಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರು ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ.ರಾಜಾಕಾಂತ್‌, ಕೆ.ಎಂ.ಮುನೇಗೌಡ, ಮುಖಂಡರಾದ ಕಿಸಾನ್‌ ಕೃಷ್ಣಪ್ಪ, ಮಟಮಪ್ಪ, ಪ್ರಭಾ ನಾರಾಯಣಗೌಡ ಇದ್ದರು.

ಬಂದ್‌ ಬೆಂಬಲಿಸುತ್ತೇವೆ

‘ಹೆಬ್ಬಾಳ ಮತ್ತು ನಾಗವಾರ ಕೆರೆಗಳ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ವಿರೋಧಿಸಿ ಪ್ರಗತಿಪರ ಪರಿಸರ ಚಿಂತಕರ ವೇದಿಕೆ ಡಿಸೆಂಬರ್‌ 20 ರಂದು ಕರೆ ನೀಡಿರುವ ‘ಚಿಕ್ಕಬಳ್ಳಾಪುರ ಬಂದ್‌’ಗೆ ಜೆಡಿಎಸ್‌ ಪಕ್ಷ ಬೆಂಬಲಿಸುತ್ತದೆ’ ಕೆ.ವಿ.ನಾಗರಾಜ್‌ ತಿಳಿಸಿದರು.

ಶಿವಶಂಕರ್‌ ಮತ್ತು ಮುನಿಕೃಷ್ಣಪ್ಪ ಅವರನ್ನು ಅಮಾನತು<br/>ಗೊಳಿಸಿ, ಅವರಷ್ಟೇ ತಪ್ಪಿತಸ್ಥರು ಎಂದರೆ ಒಪ್ಪಲಾಗದು. ಸಮಗ್ರ ತನಿಖೆಯಾಗಬೇಕು.
ಕೆ.ಪಿ.ಬಚ್ಚೇಗೌಡ,
ಜೆಡಿಎಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.