ADVERTISEMENT

ಆಹಾರ ಧಾನ್ಯ ವಿತರಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:40 IST
Last Updated 24 ಏಪ್ರಿಲ್ 2012, 8:40 IST

ಚಿಕ್ಕಬಳ್ಳಾಪುರ: ಬರದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, `ಬರಗಾಲ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವತ್ತ ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಾಚರಣೆ ಮಾಡಬೇಕು~ ಎಂದರು.

ಸುಡು ಬಿಸಿಲಿನಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಮತ್ತು ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಸಾವಿತ್ರಮ್ಮ ಮತ್ತು ನಾರಾಯಣಮ್ಮ ಕೂಡ ಅವರೊಂದಿಗೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತನಾಡಿ, `ಬರಪೀಡಿತ ಜಿಲ್ಲೆಯಲ್ಲಿ ನೀರು ಮತ್ತು ನೀರಾವರಿಯಿಲ್ಲದೆ ಸಂಕಷ್ಟಕ್ಕೀಡಾಗಿರುವ ಗ್ರಾಮಗಳಿಗೆ ಮುಖ್ಯಮಂತ್ರಿ ಮತ್ತು ಸಚಿವರು ಭೇಟಿ ನೀಡಿದರೆ ಸಾಲದು, ಪ್ರತಿ ಕುಟುಂಬಕ್ಕೂ ಕೆಜಿಗೆ 2 ರೂಪಾಯಿಯಂತೆ 35 ಕೆಜಿ ಆಹಾರಧಾನ್ಯ ವಿತರಿಸಬೇಕು~ ಎಂದು ಒತ್ತಾಯಿಸಿದರು.

`ಬತ್ತುತ್ತಿರುವ ಕೊಳವೆಬಾವಿಗಳಿಂದ ಮತ್ತು ಅಂತರ್ಜಲದ ಕುಸಿತದಿಂದ ಈಗಾಗಲೇ ಕಂಗಾಲಾಗಿರುವ ರೈತರು ಬೆಳೆ ನಷ್ಟದಿಂದಲೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಪರೀತ ಸಾಲ ಮಾಡಿಕೊಂಡಿರುವ ರೈತರು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿಗೆ ತಲುಪಿದ್ದಾರೆ. ಅವರ ನೆರವಿಗೆ ರಾಜ್ಯ ಸರ್ಕಾರ ಈ ಕೂಡಲೇ ಮುಂದಾಗಬೇಕು~ ಎಂದರು.

`ಜಿಲ್ಲೆಯಲ್ಲಿ ತಲೆದೋರಿರುವ ನೀರಿನ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆಗೆ ಕೂಡಲೇ ಕ್ರಮ ಜರುಗಿಸಬೇಕು. ಎಲ್ಲ ಹೋಬಳಿ ಕೇಂದ್ರಗಳಲ್ಲಿ ಗಂಜಿ ಕೇಂದ್ರ ಮತ್ತು ಗೋಶಾಲೆಗಳನ್ನು ತೆರೆಯಬೇಕು. ಈ ಕೂಡಲೇ ಸರ್ಕಾರ ಕಾರ್ಯಪ್ರವೃತ್ತವಾಗಬೇಕು~ ಎಂದು ಅವರು ಒತ್ತಾಯಿಸಿದರು.

`ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರದ್ದುಪಡಿಸಬೇಕು ಮತ್ತು ಸರ್ಕಾರ ದುಂದುವೆಚ್ಚವನ್ನು ಕಡಿತಗೊಳಿಸಬೇಕು~ ಎಂದು ಶ್ರೀರಾಮರೆಡ್ಡಿ ಆಗ್ರಹಿಸಿದರು. ಸಿಪಿಎಂ ಮುಖಂಡರಾದ ಎಂ.ಪಿ.ಮುನಿವೆಂಕಟಪ್ಪ, ಚನ್ನರಾಯಪ್ಪ, ಸಿದ್ದಗಂಗಪ್ಪ, ಗೋಪಿನಾಥ್, ಬಿ.ಎನ್. ಮುನಿಕೃಷ್ಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.