ADVERTISEMENT

ಇಬ್ಬರು ಶಾಸಕರ ವಿರುದ್ಧ ಆಕ್ರೋಶ, ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 7:25 IST
Last Updated 14 ಅಕ್ಟೋಬರ್ 2012, 7:25 IST

ಚಿಕ್ಕಬಳ್ಳಾಪುರ: ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಶಾಸಕರಾದ ಡಾ. ಎಂ.ಸಿ.ಸುಧಾಕರ್, ಎನ್.ಎಚ್.ಶಿವಶಂಕರ ರೆಡ್ಡಿ ನಡುವಿನ ಶೀತಲ ಸಮರ ಮುಂದುವರಿದಿದ್ದು, ಈಗ ಅವರ ಬೆಂಬಲಿಗರು ಸಹ ಪ್ರತ್ಯೇಕ ಸಭೆಗಳನ್ನು ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. `ಬೇರೆ ಬೇರೆ ಕುತಂತ್ರಗಳನ್ನು ಅನುಸರಿಸಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಶಪಡಿಸುವ ಯತ್ನ ನಡೆದಿದೆ~ ಎಂದು ಎರಡೂ ಬಣಗಳ ಬೆಂಬಲಿಗರು ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕೆಪಿಸಿಸಿ ಸದಸ್ಯ ಡಾ. ಕೆ.ಸುಧಾಕರ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲಿಗರು ಶಾಸಕರಾದ ಡಾ. ಎಂ.ಸಿ.ಸುಧಾಕರ್ ಮತ್ತು  ಎನ್.ಎಚ್.ಶಿವಶಂಕರ ರೆಡ್ಡಿ ವಿರುದ್ಧ ಹರಿಹಾಯ್ದರು. `ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಅವರ ಕುರಿತು ಇಲ್ಲಸಲ್ಲದ ಆರೋಪಗಳು  ಮಾಡುವುದನ್ನು ನಿಲ್ಲಿಸಬೇಕು~ ಎಂದು ಆಗ್ರಹಿಸಿದರು.

ಕೆಪಿಸಿಸಿ ಸದಸ್ಯ ಡಾ. ಕೆ.ಸುಧಾಕರ್ ಮಾತನಾಡಿ, `ಎಲ್ಲ ಜಾತಿ-ಧರ್ಮಗಳನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದೆ. ಇದರ ಹಿನ್ನೆಲೆಯಲ್ಲಿ ಇತ್ತೀಚಿನ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶೇಖ್ ಮೌಲಾ ಅವರನ್ನು ಅಧ್ಯಕ್ಷರನ್ನಾಗಿಸಲು ನಿರ್ಧರಿಸಿತ್ತು. ಆದರೆ ಇದನ್ನು ಆಕ್ಷೇಪಿಸಿದ ಡಾ. ಎಂ.ಸಿ.ಸುಧಾಕರ್ ಮತ್ತು ಎನ್.ಎಚ್.ಶಿವಶಂಕರ ರೆಡ್ಡಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸಿದರು. ಇನ್ನೊಬ್ಬ ಆಕಾಂಕ್ಷಿಯಾದ ಎಸ್.ಎನ್.ಚಿನ್ನಪ್ಪ ಅಧ್ಯಕ್ಷರಾಗಬೇಕೆ ಹೊರತು ಶೇಖ್ ಮೌಲಾ ಅಲ್ಲ ಎಂದು ಪಟ್ಟು ಹಿಡಿದರು. ಇದರ ಪರಿಣಾಮವಾಗಿ ಚುನಾವಣೆ ಮುನ್ನ ಕೆಲವಾರು ರಾಜಕೀಯ ಬದಲಾವಣೆಗಳು ನಡೆದವು. ಬೇರೆಯವರೇ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು~ ಎಂದರು.

`ಈ ಎಲ್ಲ ಬೆಳವಣಿಗೆಗಳಿಗೆ ಕೆ.ಎಚ್.ಮುನಿಯಪ್ಪ ಅವರೇ ಕಾರಣವೆಂದು ಶಾಸಕರು ಟೀಕಿಸುತ್ತಿರುವುದು ಸರಿಯಲ್ಲ. ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ನಾಗರಿಕತೆಯ ಲಕ್ಷಣವಲ್ಲ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ರಾಜ್ಯಕ್ಕೆ ಅಪಾರವಾದ ಕೊಡುಗೆ ಸಲ್ಲಿಸಿದ್ದಾರೆ. ಒಂದೇ ಕ್ಷೇತ್ರದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿ ಬರುವುದು ಸಾಮಾನ್ಯ ಸಂಗತಿಯೇನಲ್ಲ. ಇಲ್ಲಸಲ್ಲದ್ದು ಹೇಳಿ ಅವರನ್ನು ಟೀಕಿಸುವುದು ಖಂಡನೀಯ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಕೆ.ಎಚ್.ಮುನಿಯಪ್ಪ ಬಗ್ಗೆ ಮಾತ್ರವಲ್ಲ, ಬಾಗೇಪಲ್ಲಿಯ ಸುಬ್ಬಾರೆಡ್ಡಿ, ಗೌರಿಬಿದನೂರಿನ ವೇಣುಗೋಪಾಲ ರೆಡ್ಡಿ, ಚಿಂತಾಮಣಿಯ ಶ್ರೀರಾಮರೆಡ್ಡಿ ಮತ್ತು ನನ್ನ ಬಗ್ಗೆಯೂ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅವರು ಹೀಗೆ ಮಾತನಾಡಲು ಯಾವುದೇ ಹಕ್ಕು ಹೊಂದಿಲ್ಲ. ಪ್ರಾಮಾಣಿಕ ಪರಿಶ್ರಮ ಮತ್ತು ಪ್ರಯತ್ನದಿಂದ ನಾವೆಲ್ಲರೂ ಕಾಂಗ್ರೆಸ್ ಬಲಪಡಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಅದನ್ನು ಒಡೆಯುವಂತಹ ಪ್ರಯತ್ನ ಮಾಡಬಾರದು~ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎನ್.ಅಶ್ವತ್ಥಪ್ಪ, `ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರದ್ದು ಯಾವುದೇ ಪಾತ್ರವಿಲ್ಲ. ಅವರು ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡಿಲ್ಲ. ನಾವು ಎಲ್ಲ 14 ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರು ಸಮಾನ ಮನಸ್ಕರಾಗಿ ಚಿಂತನೆ ಮಾಡಿದೆವು. ಬಿಜೆಪಿಗೆ ರಾಜೀನಾಮೆ ನೀಡಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಲ್ಲಿ ಮಾತ್ರ ಸಿ.ಆರ್.ನರಸಿಂಹಮೂರ್ತಿ ಅವರ ಪರ ಮತ ಚಲಾಯಿಸಲು ನಿರ್ಧರಿಸಿದೆವು. ಅದರಂತೆಯೇ ಅವರ ಪರ ಮತ ಚಲಾಯಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದೆವು~ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ವಿ.ಶ್ರೀರಾಮರೆಡ್ಡಿ, ಎಸ್.ಎಂ.ನಾರಾಯಣಸ್ವಾಮಿ, ಗೌರಿಬಿದನೂರು ಕಾಂಗ್ರೆಸ್ ಮುಖಂಡ ವೇಣುಗೋಪಾಲರೆಡ್ಡಿ, ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಅನುಸೂಯಮ್ಮ ನಟರಾಜನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.