ADVERTISEMENT

ಉತ್ತರ ಪಿನಾಕಿನಿ ನದಿ ಒಡಲಿಗೆ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 9:40 IST
Last Updated 2 ಜುಲೈ 2012, 9:40 IST

ಗೌರಿಬಿದನೂರು: ಪಟ್ಟಣದ ಅಗಸರ ಬಡಾವಣೆ ಸಮೀಪ ಉತ್ತರ ಪಿನಾಕಿನಿ ನದಿಗೆ ಪುರಸಭೆ ತ್ಯಾಜ್ಯ ಹಾಗೂ ಕೋಳಿ ಪುಕ್ಕ ಸುರಿಯುತ್ತಿದೆ. ಮಳೆ ಕೊರತೆ ಹಾಗೂ ಮರಳು ಗಣಿಗಾರಿಕೆಯಿಂದ ಈಗಾಗಲೇ ಅಸ್ತಿತ್ವ ಕಳೆದುಕೊಂಡಿರುವ ನದಿ ತ್ಯಾಜ್ಯದ ಸುರಿಹೊಂಡವಾಗಿ ಬದಲಾಗಿದೆ.

ಇಡಗೂರು ರಸ್ತೆಯಲ್ಲಿ ತ್ಯಾಜ್ಯ ಸುರಿಯಲು ನಿರ್ದಿಷ್ಟ ಸ್ಥಳವಿದ್ದರೂ ಪೌರ ಕಾರ್ಮಿಕರು ಪಟ್ಟಣದ ಸಮೀಪವೇ ಇರುವ ಉತ್ತರ ಪಿನಾಕಿನಿಯ ಒಡಲಿಗೆ ಸುರಿಯುತ್ತಿದ್ದಾರೆ. ಸ್ಥಳೀಯ ನಿವಾಸಿಗಳು ಕೆಟ್ಟ ವಾಸನೆಯಲ್ಲಿಯೇ ದಿನದೂಡಬೇಕಾಗಿದೆ. ಗಾಳಿಗೆ ಹಾರಾಡುವ ಕೋಳಿ ಪುಕ್ಕಗಳು ಮನೆಯ ಮೇಲೆ ಬೀಳುತ್ತಿವೆ ಎಂದು ಸ್ಥಳೀಯ ನಿವಾಸಿ ರಮೇಶ್‌ರಾವ್ ದೂರುತ್ತಾರೆ.

ಕೋಳಿ ಮಾಂಸ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಸಂಗ್ರಹವಾಗುವ ಕೋಳಿ ಪುಕ್ಕವನ್ನು ಪುರಸಭೆ ಟ್ರ್ಯಾಕ್ಟರ್‌ಗಳಿಗೆ ಹಾಕುತ್ತಿಲ್ಲ. ನದಿಗೆ ಸುರಿಯುತ್ತಿದ್ದಾರೆ. ಮಳೆ ಬಂದು ನದಿಯಲ್ಲಿ ಸ್ವಲ್ಪ ನೀರು ತುಂಬಿಕೊಂಡರೆ ಕೋಳಿ ಕಸ ಸಂಪೂರ್ಣ ಕೊಳೆತು ದುರ್ನಾತ ಬಿರುತ್ತದೆ ಎಂದು ಸ್ಥಳೀಯರು ಅಲವತ್ತುಕೊಳ್ಳುತ್ತಾರೆ.

ಅಗಸರ ಬಡಾವಣೆಯಿಂದ ನದಿ ದಾಟಿ ಪಟ್ಟಣಕ್ಕೆ ಬರುವ ನೂರಾರು ವಿದ್ಯಾರ್ಥಿಗಳು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಸಂಗ್ರಹಿಸುವ ತ್ಯಾಜ್ಯವನ್ನು ಇಡಗೂರು ರಸ್ತೆಯಲ್ಲಿ ಪುರಸಭೆ ನಿಗದಿ ಮಾಡಿರುವ ಸ್ಥಳದಲ್ಲಿಯೇ ಸುರಿಯಬೇಕು. ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ನಿವಾಸಿಗಳಾದ ನರಸಿಂಹಪ್ಪ, ರಾಮಾಂಜನೇಯಲು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.