ADVERTISEMENT

ಕೃಷಿಗೆ ಜೀವ ತಂದ ಹೊಂಡ..

ಡಿ.ಜಿ.ಮಲ್ಲಿಕಾರ್ಜುನ
Published 14 ಜುಲೈ 2013, 8:16 IST
Last Updated 14 ಜುಲೈ 2013, 8:16 IST

ಕೊಳವೆಬಾವಿಗಳ ಅತಿಯಾದ ಬಳಕೆಯಿಂದ ಅಂತರ್ಜಲದ ಪ್ರಮಾಣ ಕುಸಿಯತೊಡಗಿದೆ. ಮಳೆಯಿಲ್ಲದೆ ಕೆರೆಗಳು ಸಹ ಬತ್ತುತ್ತಿರುವುದರಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದು ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೂ ಕೃಷಿ ಚಟುವಟಿಕೆಯನ್ನೇ ಯಶಸ್ವಿಯಾಗಿ ಕೈಗೊಳ್ಳಬೇಕೆಂಬ ಹುಮ್ಮಸ್ಸಿನಲ್ಲಿ ಕೆಲ ರೈತರು ಇದ್ದಾರೆ. ಅಂತಹವರಲ್ಲಿ ರೈತ ದೊಡ್ಡಮುನಿವೆಂಕಟಪ್ಪ ಒಬ್ಬರು.

ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿಯ ಕೃಷಿಕರಾಗಿರುವ ದೊಡ್ಡಮುನಿವೆಂಕಟಪ್ಪ ಅವರು ಸದ್ದಿಲ್ಲದೇ ನೀರಿನ ಉಳಿತಾಯ ಮತ್ತು ಸದ್ಬಳಕೆಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಸುಮಾರು 20 ಅಡಿಗಳಷ್ಟು ಉದ್ದ, 20 ಅಡಿಗಳಷ್ಟು ಅಗಲ ಮತ್ತು 3 ಅಡಿಗಳಷ್ಟು ಆಳದ ಕೃಷಿ ಹೊಂಡ ತೋಡಿರುವ ಅವರು ನೀರಿನ ಸಂಗ್ರಹಣೆ ಮತ್ತು ಸದ್ಬಳಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

`ನೀರು ಇಲ್ಲದೇ ಸಂಕಷ್ಟಕ್ಕೆ ಒಳಗಾಗುವುದರ ಬದಲು ನಾನೇ ಒಂದು ಕೃಷಿ ಹೊಂಡ ನಿರ್ಮಿಸಿಕೊಂಡರೆ ಉತ್ತಮ ಅಂತ ಅನ್ನಿಸಿತು. ಸುಮಾರು ಒಂದೂವರೆ ವರ್ಷದ ಹಿಂದೆ ನಿರ್ಮಿಸಿಕೊಂಡ ಈ ಕೃಷಿ ಹೊಂಡದಿಂದ ಈಗ ಬಹುಪಯೋಗಿಯಾಗಿದೆ. ಕೊಳವೆಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆಯಲ್ಲದೇ ಅಕ್ಕಪಕ್ಕದ ಜಮೀನಿನ ಕೊಳವೆಬಾವಿಗಳಲ್ಲಿನ ನೀರಿನ ಸಮಸ್ಯೆಯು ಬಗೆಹರಿದಿದೆ' ಎಂದು ರೈತ ದೊಡ್ಡಮುನಿವೆಂಕಟಪ್ಪ ತಿಳಿಸಿದರು.

`ಕೃಷಿ ಹೊಂಡದಲ್ಲಿ ನಿಲ್ಲುವ ನೀರಿನಿಂದ ಟೊಮೆಟೊ, ಧನಿಯಾ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ದನಕರುಗಳಿಗೆ ಬೇಕಾದ ಸೀಮೆಹುಲ್ಲು, ಜೋಳ ಮುಂತಾದವು ಬೆಳೆಯುತ್ತಿದ್ದೇವೆ. ಇಷ್ಟೇ ಅಲ್ಲ, ಸಮೀಪದ ಮುನೇಶ್ವರಸ್ವಾಮಿ ದೇವರ ಪೂಜೆಗಾಗಿ ಐವತ್ತು ಗುಲಾಬಿ ಗಿಡಗಳು, ಗೆನೇರಿಯಾ ಹೂಗಳನ್ನು ಬೆಳೆಸಲು ಸಹ ಹೊಂಡದ ನೀರು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ' ಎಂದು ಅವರು ತಿಳಿಸಿದರು.

`ನಮ್ಮ ತೋಟದಲ್ಲಿರುವ ಕೊಳವೆ ಬಾವಿ ಬೇಸಿಗೆ ಬಂದೊಡನೆ ನೀರಿಲ್ಲದಂತೆ ಆಗುತಿತ್ತು. ಕೃಷಿ ಚಟುವಟಿಕೆ ಕೈಗೊಳ್ಳಲು ತೊಂದರೆಯಾಯಿತು. ಆಗ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸರ್ಕಾರದ 60 ಸಾವಿರ ರೂಪಾಯಿ ಸಹಾಯಧನ ಪಡೆದು ಕೃಷಿ ಹೊಂಡ ನಿರ್ಮಿಸಿದೆ. ಮಳೆ ನೀರು ಬಂದು ಹೊಂಡವು ತುಂಬುತ್ತಿದ್ದಂತೆಯೇ ಹಲ ಬದಲಾವಣೆಗಳು ಗೋಚರಿಸತೊಡಗಿತು.ಕೃಷಿ ಚಟುವಟಿಕೆ ಕೈಗೊಳ್ಳಲು ಸಹಕಾರಿಯಾಯಿತು. ನೀರಿಲ್ಲದೇ ಪರಿತಪಿಸುತ್ತಿದ್ದ ಜಾನುವಾರುಗಳು ಕೂಡ ಇಲ್ಲಿ ಬಂದು ನೀರು ಕುಡಿಯತೊಡಗಿದವು. ರೈತನಿಗೆ ಇದಕ್ಕಿಂತ ಇನ್ನೇನೂ ಬೇಕು' ಎಂದರು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.