ADVERTISEMENT

ಚುಟುಕು: ಮನೆಯಂಗಳದಿ ಕವಿ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 6:50 IST
Last Updated 13 ಮಾರ್ಚ್ 2012, 6:50 IST

ಚಿಂತಾಮಣಿ: ನಗರದ ಕನಂಪಲ್ಲಿಯಲ್ಲಿ ಇರುವ ಶಿಕ್ಷಕ ವೆಂಕಟರಮಣ ನಾಯಕ ನಿವಾಸದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಉಭಯ ಜಿಲ್ಲೆಗಳ ವಿವಿಧೆಡೆಯಿಂದ ಬಂದಿದ್ದ ಸಾಹಿತಿಗಳು ಹಾಗೂ ಗಾನ ಕಲಾವಿದರು ಪಾಲ್ಗೊಂಡಿದ್ದರು.

ಕನ್ನಡ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಕಾಗತಿ ವೆಂಕಟರತ್ನಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು ಒಂದೂವರೆ ದಶಕದಿಂದ ನಿರಂತರವಾಗಿ ನಡೆದು ಬರುತ್ತಿರುವ ಮನೆಗೊಂದು ಕವಿಗೋಷ್ಠಿ ಕಾರ್ಯಕ್ರಮವು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ವೆಂಕಟರಮಣನಾಯಕ, ಜನ ಸಾಮಾನ್ಯರಿಗೆ ಅರ್ಥವಾಗುವಂತಹ ಹಾಗೂ ಜನರ ನೋವು-ನಲಿವುಗಳಿಗೆ ಸ್ಪಂದಿಸುವಂತಹ ಸಾಹಿತ್ಯವು ರಚನೆಯಾಗಬೇಕು. ಮನೆಗೊಂದು ಕವಿಗೋಷ್ಠಿಯು ಮನೆ-ಮನಗಳಲ್ಲಿ ಕಾವ್ಯದ ಕಂಪನ್ನು ಬೀರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕವಿಗೋಷ್ಠಿಯಲ್ಲಿ ಕೋಲಾರದ ಪಾಪೇಗೌಡ, ಸುನೀತಾ, ಅಶೋಕ್‌ಕುಮಾರ್, ಎ.ಹನುಮಂತಯ್ಯ, ವಿ.ನಾರಾಯಣರೆಡ್ಡಿ, ಅಕ್ಕಿಮಂಗಲ ಮಂಜುನಾಥ್, ವಿ.ವೆಂಕಟರತ್ನಂ, ರಾಯಲ್ ಶಿ.ಮ.ಮಂಜುನಾಥ್, ಕೆ.ಎಸ್.ನೂರುಲ್ಲಾ, ಎಸ್. ಸಿ.ನರಸಿಂಹಪ್ಪ ಮತ್ತಿತರರು ಸ್ವ-ರಚಿತ ಕವನ ಹಾಗೂ ಚುಟುಕುಗಳನ್ನು ವಾಚಿಸಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ದೇವರ ಮಳ್ಳೂರು ಮಹೇಶ್ ಕುಮಾರ್, ಸೀಕಲ್ ನರಸಿಂಹಪ್ಪ, ಆರೋಗ್ಯ ಇಲಾಖೆಯ ಗೌರಮ್ಮ, ಡಿ.ಎ.ಮಂಜುನಾಥ್, ರವಿ, ಸ್ವಾರಪ್ಪಲ್ಲಿ ಚಂದ್ರಶೇಖರ್, ನವಾಜ್, ರಾಜೇಶ್, ವಂದನಾ, ಮುಂತಾದವರು ಗೀಗೀ ಪದ, ಜಾನಪದ ಗೀತೆ ಹಾಗೂ ಭಾವಗೀತೆಗಳನ್ನು ಹಾಡಿದರು. 

ಹಾಸ್ಯ ಕಲಾವಿದ ಮುಳ್ಳಹಳ್ಳಿ ನಂಜುಂಡೇಗೌಡರು ಹಾಸ್ಯ ಚಟಾಕಿಗಳನ್ನು ಹಾರಿಸಿ ರಂಜಿಸಿದರು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವ ನಗರದ ವೆಂಕಟಗಿರಿಕೋಟೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿ.ನಾರಾಯಣರೆಡ್ಡಿಯನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.