ಚಿಕ್ಕಬಳ್ಳಾಪುರ: ಅಧಿಕಾರಿಗಳು ಸಾರ್ವಜನಿಕರನ್ನು ಕಚೇರಿಗಳಿಗೆ ವಿನಾ ಕಾರಣ ಅಲೆಯುವಂತೆ ಮಾಡುವ ಪ್ರವೃತ್ತಿ ಬಿಟ್ಟು ಉಚಿತವಾಗಿ ಜನ ಸೇವೆ ಮಾಡಬೇಕು ಎಂದು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಮಂಗಳವಾರ ಇಲ್ಲಿ ತಾಕೀತು ಮಾಡಿದರು.
ಅಲ್ಪಸಂಖ್ಯಾತರಿಗೆ ಲಭ್ಯ ವಿರುವ ಸವಲತ್ತುಗಳು ಮತ್ತು ಯೋಜನೆಗಳ ಅನುಷ್ಠಾನ ಕುರಿತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾರ್ವಜನಿಕರು, ಮತ್ತು ಸಂಘ ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ತಹಶೀಲ್ದಾರ್ ಕಚೇರಿಯಲ್ಲಿ ಅದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದಲ್ಲಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
ಶಿಕ್ಷಣ ಮತ್ತು ಅರೋಗ್ಯ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ ಎಲ್ಲಾ ವರ್ಗದ ಜನರಿಗೆ ಸಿಗುಬೇಕು. ಅಲ್ಪ ಸಂಖ್ಯಾತರಿಗೆ ವಿವಿಧ ಇಲಾಖೆಗಳಲ್ಲಿ ಸಿಗಲಿರುವ ಸೌಲಭ್ಯಗಳ ಬಗ್ಗೆ ನಾಮಫಲಕ ಪ್ರದರ್ಶನ ಮಾಡಬೇಕು. ಅಧಿಕಾರಿಗಳು ಲಂಚ ಕೇಳಿದಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ದೂರವಾಣಿ ಮತ್ತು ಮೊಬೈಲ್ ಸಂಖ್ಯೆಗಳಿಗೆ ದೂರು ನೀಡಲು ಅನುಕೂಲ ಅಗುವಂತೆ ದೂರವಾಣಿ ಸಂಖ್ಯೆಗಳ ಪ್ರದರ್ಶನ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಭ್ಯಾಗ್ಯಲಕ್ಷಿ ಯೋಜನೆ ಫಲಾನುಭವಿಗಳ ಕೈ ಸೇರಲು ಅಧಿಕಾರಿಗಳ ಕೈ ಬಿಸಿಯಾಗಬೇಕು. ಈ ಪರಿಪಾಠ ಬಿಡಬೇಕು ಎಂದರಲ್ಲದೇ ಅಧಿಕಾರಿಗಳು ಸಭೆಗೆ ಮಾಹಿತಿ ಇಲ್ಲದೇ ಬಂದಿದ್ದು, ಇಂತಹ ನಿರ್ಲಕ್ಷ ಮನೋಭಾವನೆ ಬಿಡಬೇಕು ಎಂದು ತರಾಟೆಗೆ ತೆಗೆದುಕೊಂಡರು. ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ 2007-08ರ ಸಾಲಿನಲ್ಲಿ 6338 ಬಾಂಡ್‌ಗಳು ಈಚೆಗೆ ಮುಖ್ಯಮಂತ್ರಿಗಳಿಂದ ಬಿಡುಗಡೆ ಮಾಡಿಸಲಾಗಿದೆ. 08-09ರ ಸಾಲಿನ 5997 ಬಾಂಡ್‌ಗಳು ಸರ್ಕಾರದಿಂದ ಬರಬೇಕಿದೆ. 09-10ರ ಸಾಲಿನ 7174 ಬಾಂಡ್‌ಗಳು ಬರಬೇಕಾಗಿದ್ದು ಈವರೆಗೆ ಕೇವಲ 14 ಬಾಂಡ್‌ಗಳು ಮಾತ್ರ ಬಂದಿವೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಶೇಕಡ 25ಕ್ಕಿಂತ ಹೆಚ್ಚು ಅಲ್ಪಸಂಖ್ಯಾತರ ಮಕ್ಕಳು ಇದ್ದಲ್ಲಿ ಅಂತಹ ಅಂಗನವಾಡಿಗಳನ್ನು ಅಲ್ಪಸಂಖ್ಯಾತರ ಅಂಗನವಾಡಿಗಳು ಎಂದು ಗುರ್ತಿಸಬೇಕು. ಜಿಲ್ಲೆಯಲ್ಲಿ 1938 ಅಂಗನವಾಡಿ ಕೇಂದ್ರಗಳಿದ್ದು ಇವುಗಳಲ್ಲಿ ಕಿಶೋರಿ ಶಕ್ತಿ ಯೋಜನೆಯ 2828 ಫಲಾನುಭವಿಗಳು ಇದ್ದಾರೆ. ಅವರ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ. ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಅಂತರ್‌ಜಾಲದಲ್ಲಿ ಈ ಮಾಹಿತಿ ಪ್ರಕಟಿಸಬೇಕು ಎಂದು ತಾಕೀತು ಮಾಡಿದರು.
ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲಿಸಿ ಮಾತನಾಡಿ, ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿ ವರೆಗೆ 5615 ಅಲ್ಪಸಂಖ್ಯಾತರ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಪ್ರೌಢಶಾಲೆಗಳಲ್ಲಿ ಕೇವಲ 402 ಮಕ್ಕಳು ವಾಸಂಗ ಮಾಡುತ್ತಿದ್ದಾರೆ. ಶಾಲೆ ಬಿಟ್ಟವರ ಸಂಖ್ಯೆ ಏಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಏನು ಕ್ರಮ ತೆಗೆದುಕೊಂಡಿದ್ದೀರಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನ ಸಮರ್ಪಕವಾಗಿ ಆಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.
ಡಿಡಿಪಿಐ ಚಂದ್ರಶೇಖರ್ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ವರ್ಗವಾಗಿ ಹೋಗುವ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮಾತ್ರವಲ್ಲದೇ ಇತರೆ ಖಾಸಗಿ ಶಾಲೆಗಳಿಗೆ ಸೇರ್ಪಡೆ ಆಗಿರುತ್ತಾರೆ ಎಂದು ಉತ್ತರಿಸಿದರು.
ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚ ಹೆಚ್ಚುತ್ತಿದೆ. ಔಷಧಿಗಳ ದಾಸ್ತಾನು ಇದ್ದರೂ; ಹೊರಗಡೆ ತರುವಂತೆ ಚೀಟಿ ಬರೆದು ಕೊಡಲಾಗುತ್ತಿದೆ. ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಸಣ್ಣ ಪ್ರಮಾಣದ ಚಿಕಿತ್ಸೆಗೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂದು ಮಾಣಿಪ್ಪಾಡಿ ಆರೋಪಿಸಿದರು.
ಮಡಿಲು ಕಿಟ್‌ಗಳನ್ನು ನೀಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ತಾಯಿ ಕಾರ್ಡ್ ನೀಡಲು ಲಂಚ ಕೇಳಲಾಗುತ್ತಿದೆ. ಸರ್ಕಾರ ನೀಡುವ ಯಾವುದೇ ಸೌಲಭ್ಯಗಳನ್ನು ರೋಗಿಗಳಿಗೆ ನೀಡುತ್ತಿಲ್ಲ ಎಂದು ಅಲ್ಪಸಂಖ್ಯಾತರ ಸಮುದಾಯದ ನಾಯಕಿ ಶಹೀನಾ ಆರೋಪಿಸಿದರು.
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನೀಡುವ ಉತ್ತೇಜನ ಹಣವನ್ನು ಶಾಲಾ ಕಾಲೇಜುಗಳು ಮುಖ್ಯಸ್ಥರ ಹೆಸರಿಗೆ ನೀಡದೇ ನೇರವಾಗಿ ವಿದ್ಯಾರ್ಥಿಗಳ ಹೆಸರಿಗೆ ಚೆಕ್‌ಗಳನ್ನು ನೀಡಬೇಕು ಎಂದು ಹೇಳಿದರು.
ಮೆಟ್ರಿಕ್ ಪೂರ್ವ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳನ್ನು ತೆರೆಯಲು ಹೊಸದಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ಇದಕ್ಕಾಗಿ ನೀಡುವ ಅನುದಾನ ಉಳಿಕೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಹಣ ಉಳಿಕೆ ಆಗದಂತೆ ನೋಡಿಕೊಳ್ಳಿ. ಇಲಾಖೆಯಿಂದಲೇ ವಿದ್ಯಾರ್ಥಿ ನಿಲಯಗಳನ್ನು ನಡೆಸಿ ಎಂದು ಹೇಳಿದರು.
ಪಾಲಿಟೆಕ್ನಿಕ್, ನರ್ಸಿಂಗ್ ತರಬೇತಿ ಮತ್ತು ಇತರೆ ಕೋರ್ಸುಗಳಲ್ಲಿ ಅಧ್ಯಯನ ನಡೆಸುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನದ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಿದರು.
ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರು ತಪ್ಪು ಅಂಕಿ ಅಂಶಗಳನ್ನು ನೀಡುತ್ತಿದ್ದಾರೆ. ಸರಿಯಾದ ಮಾಹಿತಿಯನ್ನು ಒದಗಿಸಬೇಕು. ಫಲಾನುಭವಿಗಳನ್ನು ಗುರುತಿಸಿ ಅವರ ಪಟ್ಟಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಬೇಕು. ಅರ್ಹ ಫಲಾನುಭವಿಗಳಿಗೆ ಇಲಾಖೆಯ ಸೌಲಭ್ಯಗಳು ಸಿಗುವಂತೆ ಆಗಬೇಕು ಎಂದು ಹೇಳಿದರು.
ಕಾರ್ಮಿಕ ಅಧಿಕಾರಿ ಮಾತನಾಡಿ ಕಳೆದ 2 ವರ್ಷಗಳಿಂದ ಕೇವಲ 22 ಬಾಲ ಕಾರ್ಮಿಕರು ಮಾತ್ರ ಪತ್ತೆಯಾಗಿದ್ದಾರೆ ಎಂದರು. ಈ ಬಗ್ಗೆ ಕೆರಳಿದ ಅಧ್ಯಕ್ಷ ಮಾಣಿಪ್ಪಾಡಿ ಜಿಲ್ಲೆಯ ಎಲ್ಲಾ ವರ್ಕ್‌ಶಾಪ್‌ಗಳಲ್ಲಿ ಮತ್ತು ಹೋಟೆಲ್‌ಗಳಲ್ಲಿ ಬಹುತೇಕ ಬಾಲ ಕಾರ್ಮಿಕರು ಇದ್ದಾರೆ. ಅವರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ. ಅವರನ್ನು ಪತ್ತೆ ಮಾಡಿ ಅವರಿಗೆ ಸೂಕ್ತ ಪುನರ್‌ವಸತಿ ಕಲ್ಪಿಸಿ ಶಾಲೆಗೆ ಸೇರಿಸಿ ಎಂದು ಹೇಳಿದರು.
ಅಲ್ಪ ಸಂಖ್ಯಾತರ ಆಯೋಗದ ಕಾರ್ಯದರ್ಶಿ ಅತೀಕ್ ಅಹ್ಮದ್ ಮಾತನಾಡಿದರು. ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಡ್ಯಾನಿ ಡಿಸೋಜ, ಪೀರ್‌ಖಾನ್‌ಸಾಬ್, ಪದ್ಮಾಜೈನ್ ಮತ್ತು ಜಿಲ್ಲಾ ಸಮಿತಿಯ ಸದಸ್ಯರಾದ ಮೆಹಬೂಬ್‌ಖಾನ್, ನಾಗೇಂದ್ರಕುಮಾರ್‌ಜೈನ್, ಜಿ.ಪಂ. ಉಪಾಧ್ಯಕ್ಷೆ ಸಾವಿತ್ರಮ್ಮ, ಜಿಲ್ಲಾಧಿಕಾರಿ ಮಂಜುಳಾ, ಸಿಇಒ ಶೇಖರಪ್ಪ, ಎಸ್‌ಪಿ ಟಿ.ಡಿ.ಪವಾರ್, ಉಪ ಕಾರ್ಯದರ್ಶಿ ಜುಲ್ಪಿಖರುಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.