ADVERTISEMENT

ತಾ.ಪಂ.ಅಧಿಕಾರ ಯಾರ ಮಡಿಲಿಗೆ ?

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 6:20 IST
Last Updated 26 ಫೆಬ್ರುವರಿ 2011, 6:20 IST

ಚಿಂತಾಮಣಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಇದೇ 26ರ ಶನಿವಾರ ನಡೆಯಲಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಯಾರಿಗೆ ದಕ್ಕಬಹುದು ಎಂಬ ಊಹಾಪೋಹ ಎಲ್ಲೆಡೆ ಹರಿದಾಡುತ್ತಿದೆ.ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿದ್ದು, ಅಧಿಕಾರ ಹಿಡಿಯಲು ಶಾಸಕ ಡಾ.ಎಂ.ಸಿಸುಧಾಕರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಉತ್ಸುಕತೆ ಹೊರತು ಪಡಿಸಿದರೆ ಹೆಚ್ಚಿನ ಪೈಪೋಟಿ ಇಲ್ಲವಾಗಿದೆ. ಈ ಬಾರಿ ಆಯ್ಕೆಗೊಂಡವರು ಹೊಸಬರಾಗಿರುವುದರಿಂದ ಗೊಂದಲವಿಲ್ಲದೆ ಸುಲಲಿತವಾಗಿ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿವೆ.

ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಒಟ್ಟು 21ಸ್ಥಾನಗಳಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು 16 ಸ್ಥಾನ ಗೆಲ್ಲುವ ಮೂಲಕ ಅತ್ಯಧಿಕ ಸ್ಥಾ–ನ ಗಳಿಸಿ ಸ್ಪಷ್ಟ ಬಹುಮತ ಪಡೆದಿದ್ದಾರೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಬೆಂಬಲದ ಕಾಂಗ್ರೆಸ್ 4 ಹಾಗೂ ಜೆಡಿಎಸ್ 1ಸ್ಥಾನ ಮಾತ್ರ ಗಳಿಸಿದೆ. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಎಂ.ಸಿ.ಸುಧಾಕರ್ ತೀರ್ಮಾನ ಅಂತಿಮವಾಗಿದೆ.

ಪರಿಶಿಷ್ಟ ಜಾತಿಯಲ್ಲಿ ಒಟ್ಟು ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಗೆದ್ದಿದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ 6 ಜನರು ಅರ್ಹತೆ ಪಡೆದಿದ್ದಾರೆ. ಉಪಾಧ್ಯಕ್ಷ ಹುದ್ದೆ ಮಹಿಳೆಗೆ ಮೀಸಲಾಗಿರುವುದರಿಂದ ಅಧ್ಯಕ್ಷ ಸ್ಥಾನ ಮಹಿಳೆಗೆ ನೀಡಲಾಗುವುದಿಲ್ಲ ಎಂದು ಊಹಿಸಲಾಗಿದೆ.

ಮುಂಗಾನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗುವ ರೆಡ್ಡಪ್ಪ ಹಾಗೂ ಯನಮಲಪಾಡಿ ಕ್ಷೇತ್ರದಿಂದ ಆರಿಸಿ ಬಂದಿರುವ ಶೇಖರ್‌ಬಾಬು ಆಕಾಂಕ್ಷಿಗಳಾಗಿದ್ದು, ಇಬ್ಬರಲ್ಲಿ ಒಬ್ಬರು ಆಯ್ಕೆಯಾಗುವುದು ಖಚಿತ. ಶುಕ್ರವಾರ ರಾತ್ರಿ ಶಾಸಕರ ನೇತೃತ್ವದಲ್ಲಿ ಬೆಂಬಲಿಗರ ಸದಸ್ಯರು ಹಾಗೂ ಹಿರಿಯರು ಸೇರಿ ಎಲ್ಲರ ಅಭಿಪ್ರಾಯವನ್ನು ತೆಗೆದುಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕರ ಬೆಂಬಲಿಗರೊಬ್ಬರು ಪ್ರಜಾವಾಣಿಗೆ ತಿಳಿಸಿದರು.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕೈವಾರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಸವಿತಾ, ಮುರುಗಮಲ್ಲ ಕ್ಷೇತ್ರದಿಂದ ಆರಿಸಿ ಬಂದಿರುವ ಕೆ.ವಿ.ಮೀನಾ, ಸಂತೆಕಲ್ಲಹಳ್ಳಿಯಿಂದ ಆಯ್ಕೆಯಾಗಿರುವ ಕೆ.ಪದ್ಮಮ್ಮ, ಯಗವಕೋಟೆಯಿಂದ ಆಯ್ಕೆಯಾಗಿರುವ ವಿಜಯಮ್ಮ ಶಾಸಕರ ಬಣದಿಂದ ಅರ್ಹತೆಯುಳ್ಳವರಾಗಿದ್ದಾರೆ. ಉಪಾಧ್ಯಕ್ಷ ಹುದ್ದೆಗೂ ಹೆಚ್ಚಿನ ಪೈಪೋಟಿ ಕಂಡುಬರುತ್ತಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯಲ್ಲಿರುವ ಇಬ್ಬರು ಮುಂಗಾನಹಳ್ಳಿ ಹೋಬಳಿಗೆ ಸೇರಿರುವುದರಿಂದ, ಮುಂಗಾನಹಳ್ಳಿ ಹೋಬಳಿಗೆ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಗ್ಯಾರಂಟಿ ಆದಂತಾಗಿದೆ. ಕೈವಾರ ಕ್ಷೇತ್ರದಿಂದ ಆಯ್ಕೆಯಾಗಿರುವ ಡಿ.ಸವಿತಾ ಮತ್ತು ಸಂತೆಕಲ್ಲಹಳ್ಳಿಯಿಂದ ಆಯ್ಕೆಯಾಗಿರುವ ಕೆ.ಪದ್ಮಮ್ಮ ಅವರಿಗೆ ಅವಕಾಶವಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಂತಿಮವಾಗಿ ಶಾಸಕರ ಒಲವು ಯಾರಿಗಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.