ADVERTISEMENT

ತೆಲಂಗಾಣ ರಚನೆ; ಆಂಧ್ರ ಗಡಿ ಉದ್ವಿಗ್ನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 9:54 IST
Last Updated 1 ಆಗಸ್ಟ್ 2013, 9:54 IST

ಬಾಗೇಪಲ್ಲಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕಾಂಗ್ರೆಸ್ ಸಮ್ಮತಿ ಸೂಚಿಸಿರುವುದನ್ನು ಖಂಡಿಸಿ ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ವಿದ್ಯಾರ್ಥಿಗಳ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಮತ್ತು ಇತರ ಸಂಘಟನೆಗಳು ಬುಧವಾರ ಅಖಂಡ ಆಂಧ್ರಪ್ರದೇಶ ಬೆಂಬಲಿಗರು ತಾಲ್ಲೂಕಿನ ಆಂಧ್ರಪ್ರದೇಶದ ಗಡಿ ಚೆಕ್‌ಪೋಸ್ಟ್‌ನಲ್ಲಿ ಟೈರ್‌ಗಳನ್ನು ಸುಟ್ಟು ರಾಷ್ಟ್ರೀಯ ಹೆದ್ದಾರಿ-7 ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಸದಸ್ಯರು ತೀವ್ರವಾಗಿ ಪ್ರತಿಭಟನೆ ನಡೆಸಿದ ಕಾರಣ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆ ಬಿಸಿಗೆ ಗಡಿಭಾಗದ ಬಹುತೇಕ ಊರುಗಳು ಸ್ವಯಂ ಪ್ರೇರಣೆಯಿಂದ ಬಂದ್ ಆಚರಿಸಿದವು.

ಸೀಮಾಂದ್ರ ಮತ್ತು ರಾಯಲಸೀಮೆ ಪ್ರಾಂತ್ಯಗಳಾದ ಆನಂತಪುರ, ಕಡಪ, ಕರ್ನೂಲು ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಗಡಿಭಾಗದ ಊರುಗಳಾದ ಹಿಂದೂಪುರ, ಪೆನಕೊಂಡ, ಚಿಲಮತ್ತೂರು, ಚೆಕ್‌ಪೋಸ್ಟ್, ಗೋರಂಟ್ಲ ಸೇರಿದಂತೆ ವಿವಿಧೆಡೆ ಶಾಲಾ-ಕಾಲೇಜುಗಳು, ಸಿನಿಮಾ ಮಂದಿರ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು.

ಕೆಲ ಕಡೆ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ ಪ್ರತಿಭಟನಾಕಾರರು, `ಪ್ರತ್ಯೇಕ ತೆಲಂಗಾಣ ಸಂಬಂಧಿಸಿದಂತೆ ಕಾಂಗ್ರೆಸ್ ತನ್ನ ನಿರ್ಣಯವನ್ನು ಕೂಡಲೇ ಹಿಂಪಡೆಯಬೇಕು. ನಮ್ಮ ಬೇಡಿಕೆ ಈಡೇರದಿದ್ದಲ್ಲಿ, ನಾವು ಉಗ್ರ ಸ್ವರೂಪದ ಪ್ರತಿಭಟನೆ ನಡೆಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ಹೆದ್ದಾರಿ ಬಂದ್‌ನಿಂದ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಸಕಾಲಕ್ಕೆ ನಿಗದಿತ ಸ್ಥಳಗಳಿಗೆ ಹೋಗಲು ಸಾಧ್ಯವಾಗಲಿಲ್ಲ. ಪ್ರತಿಭಟನೆ ನಡುವೆಯೇ ನುಸುಳಿಕೊಂಡು ಹೋಗಲು ಯತ್ನಿಸಿದ ವಾಹನ ಸವಾರರು ಪ್ರತಿಭಟನಾಕಾರರು ತಡೆದರು. ಇದರಿಂದ ಪ್ರಯಾಣಿಕರು ತೊಂದರೆ ಎದುರಿಸಬೇಕಾಯಿತು. ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-7 ರ ನಾರೇಪಲ್ಲಿ ಗ್ರಾಮದ ಬಳಿಯಿರುವ ಟೋಲ್‌ಪ್ಲಾಜಾದ ಕಾರ್ಮಿಕರು ಕೆಲ ಕಾಲ ಕೆಲಸ ಇಲ್ಲದೆ ಕೂರಬೇಕಾಯಿತು.  

ಪ್ರತಿಭಟನೆಯ ನೇತೃತ್ವ ವಹಿಸಿದ ರಾಯದುರ್ಗಂ ಶಾಸಕ ಕಾಪು ರಾಮಚಂದ್ರರೆಡ್ಡಿ, `ಪ್ರತ್ಯೇಕ ತೆಲಂಗಾಣದಿಂದ ರಾಯಲ ಸೀಮಾ ಪ್ರಾಂತ್ಯಗಳು ಅಭಿವೃದ್ಧಿಯಾಗುವುದಿಲ್ಲ. ಈ ಅಂಶ ಗೊತ್ತಿದ್ದರೂ ಕಾಂಗ್ರೆಸ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಮತಗಳನ್ನು ಸೆಳೆಯುವ ಹುನ್ನಾರ ನಡೆಸಲಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧಿಸಿ ಐದು ದಿನಗಳ ಹಿಂದೆಯೇ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ತನ್ನ ನಿರ್ಣಯ ಹಿಂಪಡೆಯುವವರೆಗೆ ಹೋರಾಟ ಮುಂದುವರಿಸಲಾಗುವುದು' ಎಂದರು.

ಕಂಪ್ಯೂಟರ್ ತರಬೇತಿ ಪಡೆಯಲು ಸಲಹೆ
ಶ್ರೀನಿವಾಸಪುರ: ಸರ್ಕಾರದ ತರಬೇತಿ ಯೋಜನೆಯ ಅರ್ಹ ಫಲಾನುಭವಿಗಳು ಕಂಪ್ಯೂಟರ್ ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಪ್ರಾಂಚಸಿ ಸಂಸ್ಥೆ ಮುಖ್ಯಸ್ಥ ಎನ್‌ಕೃಷ್ಣಮೂರ್ತಿ ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.