ADVERTISEMENT

ದಟ್ಟ ಮೋಡಗಳ ಮಧ್ಯೆ ಸೂರ್ಯ ಮರೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2011, 10:05 IST
Last Updated 26 ನವೆಂಬರ್ 2011, 10:05 IST
ದಟ್ಟ ಮೋಡಗಳ ಮಧ್ಯೆ ಸೂರ್ಯ ಮರೆ
ದಟ್ಟ ಮೋಡಗಳ ಮಧ್ಯೆ ಸೂರ್ಯ ಮರೆ   

ಶಿಡ್ಲಘಟ್ಟ: ಆಗಸದಲ್ಲಿ ವ್ಯಾಪಿಸಿದ್ದ ಕಪ್ಪನೆ ಮೋಡ ಶುಕ್ರವಾರದ ಸೂರ್ಯೋದಯವನ್ನೇ ಅಡ್ಡಿಪಡಿ ಸಿತ್ತು. ಬೆಳಿಗ್ಗೆ 8 ಗಂಟೆಯಾಗಿದ್ದರೂ ಸಂಜೆ 7 ಗಂಟೆ ವಾತಾವರಣದಂತಿತ್ತು.

ಮುಂಜಾವಿನ ಹಿತಮಯ ಚಳಿಯ ಜೊತೆಜೊತೆಯಲ್ಲೇ ಜಡಿಮಳೆಯೂ ಇತ್ತು. ಬಿಸಿಲಿನ ಪ್ರತಾಪದಿಂದ ಆಯಾಸಗೊಂಡಿದ್ದ ಸಾರ್ವಜನಿಕರು ನಿರಾಳಭಾವದಲ್ಲಿ ಇರುವಂತೆ ಕಂಡು ಬಂದರು. ಬೆಚ್ಚನೆಯ ಉಡುಪುಗಳನ್ನು ತೊಟ್ಟು ಕೈಯಲ್ಲಿ ಛತ್ರಿ ಹಿಡಿದುಕೊಂಡು ಕೆಲವರು ಬಸ್‌ಗಾಗಿ ಕಾಯುತ್ತಿದ್ದರೆ, ಕೆಲವರು ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗುತ್ತಿದ್ದರು.

ಸ್ವೆಟರ್, ಟೋಪಿ ತೊಟ್ಟಿದ್ದ ಮಕ್ಕಳು ಮಳೆಯಿಂದಾಗಿ ಛತ್ರಿಯ ಮೊರೆ ಹೋಗಬೇಕಾಯಿತು. ರೇಷ್ಮೆ ಮಾರು ಕಟ್ಟೆಗೆ ಗೂಡನ್ನು ತರಲು ರೈತರು ಶ್ರಮ ಪಟ್ಟರೆ, ತಮ್ಮ ನಿತ್ಯ ಕೆಲಸಗಳಿಗೆ ಹೋಗುವವರು ಅನಿರೀಕ್ಷಿತ ಹವಾ ಮಾನ ವೈಪರೀತ್ಯದಿಂದ ಕೊಂಚ ಅಚ್ಚರಿಗೆ ಒಳಗಾಗಿದ್ದರು.

ಹೆಚ್ಚಿನ ಜನದಟ್ಟಣೆಯಿಲ್ಲದೇ ರಸ್ತೆಗಳು ಮಂಕಾಗಿದ್ದರೆ, ಅಲ್ಲಿ-ಇಲ್ಲಿ ಶಾಲಾ ಮಕ್ಕಳು ಕಾಣಿಸಿಕೊಳ್ಳು ತ್ತಿದ್ದರು. ಸೂರ್ಯ ಬಾರದಿದ್ದರೆ ಒಗೆದ ಬಟ್ಟೆಗಳು ಒಣಗದು ಎಂಬ ಚಿಂತೆ ಗೃಹಿಣಿಗೆ ಕಾಡುತ್ತಿದ್ದರೆ, ವ್ಯಾಪಾರಿಗೆ ಗ್ರಾಹಕರು ಬಾರದೆ ಕಸಿವಿಸಿಯಾಗಿತ್ತು.

`ಜೋರಾಗಿ ಮಳೆ ಹೊಯ್ದರೆ ಅನುಕೂಲವಾಗುತ್ತದೆ. ಆದರೆ ಜಡಿ ಮಳೆ ಬಿದ್ದರೆ ಏನೂ ಉಪಯೋಗವಿಲ್ಲ. ನೆಲವೆಲ್ಲಾ ಕೆಸರುಮಯವಾಗುತ್ತದೆ. ಮಾರುಕಟ್ಟೆಯಲ್ಲಿ ರೈತರ ಗೂಡಿನ ಬೆಲೆ ಕುಸಿಯುತ್ತದೆ.
 
ಗೂಡಿನ ಸಾಗಾಟಕ್ಕೂ ಅನನುಕೂಲ. ಆದರೆ ಕೆಲಸ ಕಡಿಮೆ ಯಿರುವವರು ಮಾತ್ರ ಬೆಚ್ಚಗೆ ಮನೆಯಲ್ಲಿ ಸೇರಿಕೊಂಡು, ಕುರುಕುಲು ತಿಂಡಿಗೆ ಮೊರೆ ಹೋಗಲು ವಾತಾವರಣ ಹೇಳಿ ಮಾಡಿಸಿದಂತಿದೆ~ ಎಂದು ಚೌಡಸಂದ್ರ ಕರಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.