ADVERTISEMENT

ನೀರು ಪೂರೈಕೆಗೆ ಆಗ್ರಹ; ಕಚೇರಿಗೆ ಮುತ್ತಿಗೆ

ಗ್ರಾಮೀಣ ನೀರು ಸರಬರಾಜು ಇಲಾಖೆ ಕಚೇರಿ ಎದುರು ಯರ‍್ರೈಗಾರಹಳ್ಳಿ ಗ್ರಾಮಸ್ಥರ ಪ್ರತಿಭಟನೆ; ಅಧಿಕಾರಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2018, 12:37 IST
Last Updated 28 ಮಾರ್ಚ್ 2018, 12:37 IST
ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಚಿಂತಾಮಣಿ ತಾಲ್ಲೂಕಿನ ಯರ‍್ರೈಗಾರಹಳ್ಳಿ ಜನರು ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ, ಎಪಿಎಂಸಿ ಅಧ್ಯಕ್ಷ ಅಧ್ಯಕ್ಷ ರವಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌, ಸದಸ್ಯೆ ಸುಲೋಚನಮ್ಮ ಇದ್ದಾರೆ
ಕುಡಿಯುವ ನೀರು ಪೂರೈಸುವಂತೆ ಒತ್ತಾಯಿಸಿ ಚಿಂತಾಮಣಿ ತಾಲ್ಲೂಕಿನ ಯರ‍್ರೈಗಾರಹಳ್ಳಿ ಜನರು ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ, ಎಪಿಎಂಸಿ ಅಧ್ಯಕ್ಷ ಅಧ್ಯಕ್ಷ ರವಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌, ಸದಸ್ಯೆ ಸುಲೋಚನಮ್ಮ ಇದ್ದಾರೆ   

ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿ ಎಂ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಯರ‍್ರೈಗಾರಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ನಗರದ ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ತೊಂದರೆ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದರು. ನಗರಸಭೆಯವರು ಟ್ಯಾಂಕರ್‌ ಮಾಲೀಕರಿಗೆ ಹಣ ನೀಡದ ಕಾರಣ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದಲ್ಲಿ ಮೂಲ ಸೌಲಭ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ಕುಡಿಯುವ ನೀರು, ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಅಲ್ಲದೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ಶಂಕರಾಚಾರಿ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ತಾಲ್ಲುಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ. ಶ್ರೀನಿವಾಸ್‌, ಎಂಜಿನಿಯರ್‌ ಶಂಕರಾಚಾರಿ ಪ್ರತಿಭಟನಾಕಾರರ ಜೊತೆ ಮಾತನಾಡಿದರು. ಗ್ರಾಮಕ್ಕೆ ಕೊಳವೆ ಬಾವಿ ಕೊರೆಸಲಾಗುವುದು, ಪಂಪ್‌ ಮತ್ತು ಮೋಟರನ್ನು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳುವಂತೆ ತಿಳಿಸಿದರು. ಆದರೆ ಗ್ರಾಮಸ್ಥರು. ಕುಡಿಯುವ ನೀರು ಸರಬರಾಜು ಮಾಡುವ ವರೆಗೆ ಹೋರಾಟ ನಡೆಸುವುದಾಗಿ ಪಟ್ಟು ಹಿಡಿದು ಕುಳಿತರು.

ಜಿಲ್ಲಾ ಪಂಚಾಯಿತಿ ಸದಸ್ಯ ಸ್ಕೂಲ್‌ ಸುಬ್ಬಾರೆಡ್ಡಿ, ಎಪಿಎಂಸಿ ಅಧ್ಯಕ್ಷ ರವಿ ಅವರು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 3 ದಿನಗಳ ಒಳಗೆ ಕೊಳವೆಬಾವಿ ಕೊರೆಸಿ ಪಂಪ್‌ ಮತ್ತು ಮೋಟಾರನ್ನು ಅಳವಡಿಸಿ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಡಂಪಲ್ಲಿ ಶ್ರೀನಿವಾಸ್‌, ಸದಸ್ಯೆ ಸುಲೋಚನಮ್ಮ, ಗ್ರಾಮ ಪಂಚಾಯಿತಿ ಸದಸ್ಯ ಆಂಜನಪ್ಪ, ಮುಖಂಡರಾದ ಎಂ.ವಿ.ರಘು, ಬೈರಾರೆಡ್ಡಿ, ಮಹೇಶ್‌, ವೆಂಕಟರೆಡ್ಡಿ, ರಾಮಚಂದ್ರಾರೆಡ್ಡಿ, ಶಂಕರಮ್ಮ, ವೆಂಕಟಲಕ್ಷ್ಮಮ್ಮ, ಗೌರಮ್ಮ, ನಾನಮ್ಮ, ರಮೇಶ್‌, ಗೋವಿಂದ, ರೂಪಾವತಿ, ಟಿ.ವೆಂಕಟರಮಣ, ಲಕ್ಷ್ಮೀದೇವಮ್ಮ, ಶಾಂತಮ್ಮ ಅಶ್ವತ್ಥಪ್ಪ, ಮೂರ್ತಿ, ರಾಜೇಶ್‌, ರಾಮಪ್ಪ, ನಾರಾಯಣಮ್ಮ, ಪ್ರಮೀಳಮ್ಮ, ಅಕ್ಕೈಯಮ್ಮ, ರಾಮಕ್ಕ, ಮುನಿರತ್ನಮ್ಮ, ಮುನಿಯಮ್ಮ, ಶಿವಣ್ಣ, ಚಂದ್ರಕಲಾ, ಓಬಳೇಶ್‌ ಭಾಗವಹಿಸಿದ್ದರು.

**

ಕುಡಿಯುವ ನೀರು ಇಲ್ಲದೆ ದಿನವೂ ಪರದಾಡುವಂತಾಗಿದೆ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗದೆ ಪ್ರತಿಭಟನೆ ನಡೆಸುತ್ತಿದ್ದೇವೆ - ನಡಂಪಲ್ಲಿ ಶ್ರೀನಿವಾಸ್, ತಾ.ಪಂ. ಉಪಾಧ್ಯಕ್ಷ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.