ADVERTISEMENT

ನೆರವಿಗೆ ಬಾರದ ಸರ್ಕಾರ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 9:20 IST
Last Updated 21 ಜುಲೈ 2012, 9:20 IST

ಗುಡಿಬಂಡೆ: ಬರದಿಂದ ತತ್ತರಿಸುತ್ತಿರುವ ಜನತೆ ನೆರವಿಗೆ ಸರ್ಕಾರ ಮುಂದಾಗುತ್ತಿಲ್ಲ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಎನ್.ರಾಜಾರೆಡ್ಡಿ ದೂರಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನುವಾರು ಮೇವಿನ ಕೊರತೆ ತೀವ್ರ ಉಲ್ಭಣಿಸಿದ್ದು, ಜನ ಅನ್ನ-ನೀರು ಹುಡುಕಿಕೊಂಡು ಗುಳೆ ಹೋಗುತ್ತಿದ್ದಾರೆ ಎಂದರು.

ಜುಲೈ 21ರ ಶನಿವಾರ ಧಾರವಾಡದಲ್ಲಿ ನಡೆಯುವ 32ನೇ ರೈತ ಹುತಾತ್ಮ ದಿನಾಚರಣೆಗೆ ತಾಲ್ಲೂಕಿನಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ತಾಲ್ಲೂಕು ಕಾರ್ಯದರ್ಶಿ ಗಂಗಾಧರ ಮಾತನಾಡಿ, ಸಾಲ ವಸೂಲಾತಿ ಮುಂದುವರಿದಿದೆ. ಸರ್ಕಾರ ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಸ್ಪಂದಿಸದ ಅಧಿಕಾರಿ:
ತಾಲ್ಲೂಕಿನ ಕೃಷಿ ಇಲಾಖೆಗೆ ಬಿತ್ತನೆ ಬೀಜ ಮತ್ತು ಇತರೆ ಕೃಷಿ
ಸಂಬಂಧಿತ ಉಪಕರಣ ಸರಬರಾಜಾಗುತ್ತಿದ್ದರೂ; ಅವುಗಳನ್ನು ಸರಿಯಾಗಿ ವಿತರಿಸುವಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ತಾರತಮ್ಯ ತೋರುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದರು.

ಮುಖಂಡರಾದ ಪೋಟೋ ನಾಗರಾಜ್, ಮುದ್ದುರಾಜು, ಆದಿನಾರಾಯಣಪ್ಪ, ಸುದರ್ಶನರೆಡ್ಡಿ, ಗಂಗಾದೇವಿ, ಶ್ರೀಧರ್, ನಂಜಪ್ಪ, ಹನುಮಂತರೆಡ್ಡಿ ಸೇರಿದಂತೆ ಹಲವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕಾಲುವೆ ಮೂಲಕ ನೀರು: ಆಗ್ರಹ
ಬಾಗೇಪಲ್ಲಿ:
ನರಗುಂದ-ನವಲಗುಂದದಲ್ಲಿ ನಡೆಯುತ್ತಿರುವ 32ನೇ ರೈತ ಹುತಾತ್ಮ ದಿನಾಚರಣೆಗೆ ತಾಲ್ಲೂಕಿನಿಂದ ಸುಮಾರು 300ಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಅಧ್ಯಕ್ಷ ಬಿ.ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರಡು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಲು ಎತ್ತಿನಹೊಳೆ ಯೋಜನೆಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುವುದು ಎಂದು ಕೇಂದ್ರ ಸಚಿವ ಎಂ.ವೀರಪ್ಪಮೊಯಿಲಿ, ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಹೇಳಿಕೆ ಖಂಡನಾರ್ಹ. ಕಾಲುವೆ ಮೂಲಕ ನೀರು ಹರಿಸಬೇಕು. ಮುಂದಿನ ದಿನಗಳಲ್ಲಿ ಪೈಪ್‌ಲೈನ್ ಯೋಜನೆ ರೂಪಿಸಿದರೆ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಗೌರವಾಧ್ಯಕ್ಷ ವೈ.ನಾರಾಯಣಪ್ಪ, ಖಜಾಂಚಿ ಎಸ್.ನರಸಿಂಹರೆಡ್ಡಿ, ಮಹಿಳಾ ಸಂಚಾಲಕಿ ರಾಮರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.