ADVERTISEMENT

ಪಕ್ಷಿಗಳಿಗೆ ನೀರಿಟ್ಟು, ಕಾಳು ಹಾಕಿದರು; ದಾಹ, ಹಸಿವು ತಣಿಸುವ ಪುಟ್ಟ ಪ್ರಯತ್ನ

‘ಚಿಕ್ಕಬಳ್ಳಾಪುರ ಯುವಕರ ತಂಡ’ದ ಸದಸ್ಯರಿಂದ ನರಸಿಂಹಸ್ವಾಮಿ ಬೆಟ್ಟ ಪಕ್ಷಿಗಳಿಗೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 13:03 IST
Last Updated 7 ಏಪ್ರಿಲ್ 2019, 13:03 IST
ನರಸಿಂಹಸ್ವಾಮಿ ಬೆಟ್ಟದ ಗಿಡಗಳಲ್ಲಿ ಪಕ್ಷಿಗಳ ಕುಡಿಯುವ ನೀರಿಗಾಗಿ ಅಳವಡಿಸಿದ ನೀರಿನ ಬಾಟಲ್‌
ನರಸಿಂಹಸ್ವಾಮಿ ಬೆಟ್ಟದ ಗಿಡಗಳಲ್ಲಿ ಪಕ್ಷಿಗಳ ಕುಡಿಯುವ ನೀರಿಗಾಗಿ ಅಳವಡಿಸಿದ ನೀರಿನ ಬಾಟಲ್‌   

ಚಿಕ್ಕಬಳ್ಳಾಪುರ: ತಮ್ಮನ್ನು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡ ನಗರದ ‘ಚಿಕ್ಕಬಳ್ಳಾಪುರ ಯುವಕರ ತಂಡ’ದ ಸದಸ್ಯರು ಭಾನುವಾರ ನರಸಿಂಹಸ್ವಾಮಿ ಬೆಟ್ಟಕ್ಕೆ ತೆರಳಿ ಪಕ್ಕಿಗಳಿಗಾಗಿ ಗಿಡಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ತಿನ್ನಲು ಕಾಳುಗಳನ್ನು ಇಡುವ ಮೂಲಕ ಮಾನವೀಯವಾದ ಮಾದರಿ ಕೆಲಸ ಮಾಡಿದರು.

ನೀರಿನ ಬಾಟಲಿ, ಬೌಲ್‌, ತಂತಿ, ಕಾಳುಗಳು, ನೀರಿನ ಕ್ಯಾನ್ ಸಮೇತ ಬೆಟ್ಟಕ್ಕೆ ತೆರಳಿದ ಯುವಕರು ಬೌಲ್, ನೀರಿನ ಬಾಟಲಿಗಳನ್ನು ತಂತಿಗಳ ಮೂಲಕ ಅಲ್ಲಲ್ಲಿ ಗಿಡಗಳಲ್ಲಿ ಅಳವಡಿಸಿ ನೀರು ತುಂಬಿಸಿದರು. ಜತೆಗೆ ಅಕ್ಕಿ, ಜೋಳದಂತಹ ಧಾನ್ಯಗಳನ್ನು ಪಕ್ಷಿಗಾಗಿ ಇಡುವ ಮೂಲಕ ಮೂಕ ಪ್ರಾಣಿಗಳ ಹಸಿರು, ದಾಹ ನೀಗುವ ಪುಟ್ಟ ಪ್ರಯತ್ನಕ್ಕೆ ಮುನ್ನುಡಿ ಹಾಡಿದರು.

ಸದಾ ಒಂದಿಲ್ಲೊಂದು ಸಾಮಾಜಿಕ ಕಳಕಳಿ, ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಂಡು ಬಂದಿರುವ ಈ ತಂಡ ಮಳೆಗಾಲದಲ್ಲಿ ಸಸಿಗಳನ್ನು ನೆಡುವ ಕೆಲಸ ಮಾಡುತ್ತದೆ. ಕೆಲ ತಿಂಗಳ ಹಿಂದೆ ನಗರದಲ್ಲಿ ನೇತ್ರದಾನ ಶಿಬಿರ ಆಯೋಜಿಸಿತ್ತು. ಮಡಿಕೇರಿಯಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ₹25 ಸಾವಿರ ದೇಣಿಗೆಯ ನೆರವು ನೀಡಿತ್ತು. ಇತ್ತೀಚೆಗೆ ಆವುಲಬೆಟ್ಟಕ್ಕೆ ತೆರಳಿ ಪ್ರವಾಸಿಗರು ಬಿಸಾಡಿದ್ದ ತ್ಯಾಜ್ಯವನ್ನು ಆಯುವ ಕೆಲಸ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ADVERTISEMENT

ಮಧು, ಪ್ರದೀಪ್, ರಂಜಿತ್, ಶಿಕ್ಷಕರಾದ ಮಹಾಂತೇಶ, ಸುನೀಲ್, ಸತೀಶ್, ರವಿಚಂದ್ರ, ಮಹಾನ್ ಅವರು ಈ ತಂಡದ ಸಕ್ರಿಯ ಸದಸ್ಯರಾಗಿ ಯುವ ಜನರಿಗೆ ಮಾದರಿಯಾಗುವಂತಹ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.