ADVERTISEMENT

ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳ ಜಾಥಾ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 6:05 IST
Last Updated 15 ಮಾರ್ಚ್ 2014, 6:05 IST

ಚಿಂತಾಮಣಿ: ನಗರದ ಬಾಲಕರ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು ತಾಲ್ಲೂಕಿನ ಲಕ್ಷ್ಮೀದೇವನಕೋಟೆ ಗ್ರಾಮದಲ್ಲಿ ಶುಕ್ರ­ವಾರ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ ನಡೆಸಿದರು.

ಜಾಥಾದಲ್ಲಿ ಆರೋಗ್ಯ ರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಶಿಕ್ಷಣದ ಮಹತ್ವ,  ಅಂತರ್ಜಲ ಮತ್ತು ಪರಿ­ಸರದ ಸಂರಕ್ಷಣೆ ಸಾರುವ ಭಿತ್ತಿಚಿತ್ರ­ಗಳನ್ನು ಹಿಡಿದು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.

‘ಕಾಡನ್ನು ಬೆಳೆಸಿ ನಾಡನ್ನು ಉಳಿಸಿ’, ‘ಮನೆಗೊಂದು ಮರ, ಊರಿಗೊಂದು ವನ’, ‘ಶೌಚಾಲಯ ಬಳಸಿ ಪರಿಸರ ಉಳಿಸಿ’ ಮುಂತಾದ ಘೋಷ ವಾಕ್ಯಗಳ ಕರಪತ್ರಗಳನ್ನು ಮನೆ ಮನೆಗೂ ವಿತರಿಸಿದರು.

ವಿದ್ಯಾರ್ಥಿಗಳಿಬ್ಬರು ಮರಗಳ ವೇಷ ಧರಿಸಿ ‘ನಮ್ಮನ್ನು ಕೊಲ್ಲದಿರಿ’ ಎಂಬ ನಾಮಫಲಕದೊಂದಿಗೆ ಭಾಗವಹಿಸಿದ್ದು ಜಾಥಾದ ವಿಶೇಷವಾಗಿತ್ತು. ವಿದ್ಯಾರ್ಥಿ­ಗಳು ಮನೆ ಮನೆಗೂ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳಾದ ಚಿಕುನ್‌­ಗುನ್ಯಾ, ಡೆಂಗೆ, ಮಲೇರಿಯಾ ಮತ್ತಿತರ ಕಾಯಿಲೆ ತಡೆಗೆ ಮುನ್ನಚ್ಚರಿಕೆ ಕುರಿತು ತಿಳಿವಳಿಕೆ ನೀಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ನೆಲ ಮತ್ತು ಅಂತರ್ಜಲ ಸಂರಕ್ಷಣೆ­ಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದ ಪ್ರಾಧ್ಯಾಪಕಿ ಎಚ್‌.ಜಿ.­ಸುಗುಣಾ, ದೊರೆಯುವ ಜಲ ಸಂಪ­ನ್ಮೂಲವನ್ನು ಹಿತಮಿತವಾಗಿ ಬಳಸು­ವುದೇ ಜಲಕ್ಷಾಮ ತಡೆಯ­ಬಹುದು ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕ ರಾಜಗೋಪಾಲ್‌ ನಗೆಹಬ್ಬ, ವಿದ್ಯಾರ್ಥಿಗಳ ಜನಪದ ಗೀತೆ, ಪರಿಸರ ಗೀತೆ, ವರದಕ್ಷಿಣೆ ಮತ್ತು ಹೆಣ್ಣು ಭ್ರೂಣ ಹತ್ಯೆಯ ಅರಿವು ಮೂಡಿಸುವ ನಾಟಕ ಆಕರ್ಷಣೀಯವಾಗಿ ಮೂಡಿಬಂದವು.

ಪ್ರಾಧ್ಯಾಪಕ ಕೆ.ಎನ್‌.ಕೃಷ್ಣಪ್ಪ ಅಧ್ಯ­ಕ್ಷತೆ ವಹಿಸಿದ್ದರು. ಉಪ­ನ್ಯಾಸಕ­ರಾದ ಎಸ್‌.ಎಂ.ವೆಂಕಟೇಶಪ್ಪ, ಎಚ್‌.ಆರ್‌.­ಶಿವಕುಮಾರ್‌, ಪ್ರೇಮಾ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.