ADVERTISEMENT

ಪ್ರದಕ್ಷಿಣೆಗೆ ಚೈತನ್ಯ ತುಂಬಿದ ಶಿವನಾಮ

ಅಪಾರ ಭಕ್ತಸ್ತೋಮದಿಂದ ನಂದಿ ತಪ್ಪಲಲ್ಲಿ ಅಧ್ಯಾತ್ಮ ನಡಿಗೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 9:30 IST
Last Updated 2 ಆಗಸ್ಟ್ 2016, 9:30 IST
ಪ್ರದಕ್ಷಿಣೆಗೆ ಚೈತನ್ಯ ತುಂಬಿದ ಶಿವನಾಮ
ಪ್ರದಕ್ಷಿಣೆಗೆ ಚೈತನ್ಯ ತುಂಬಿದ ಶಿವನಾಮ   

ಚಿಕ್ಕಬಳ್ಳಾಪುರ: ನಿತ್ಯ ಪ್ರಾಣಿ ಪಕ್ಷಿಗಳ ಕಲರವ ಕೇಳುವ ಗಿರಿಧಾಮದ ತಪ್ಪಲಲ್ಲಿ ಸೋಮವಾರ ನಸುಕಿನಲ್ಲಿಯೇ ಶಿವನಾಮ ಸ್ಮರಣೆಯ ಜಪ ಅನುರಣಿಸುತ್ತಿತ್ತು. ಪಂಚಗಿರಿಗಳನ್ನು ಸುತ್ತಿ ಪುಣ್ಯ ಸಂಪಾದಿಸಲು ಹೊರಟ ಆಸ್ತಿಕ ಸಮೂಹದ ನಡಿಗೆ ಹಸಿರ ಹಾದಿಗೆ ಬಣ್ಣದ ಉಡುಗೆ ತೊಡಿಸಿದಂತಿತ್ತು. ದಣಿವಾರಿಸಿಕೊಳ್ಳುತ್ತ ಕೊನೆಗೊಮ್ಮೆ ಗುರಿ ಮುಟ್ಟಿದವರ ಮೊಗದಲ್ಲಿ ಧನ್ಯತೆಯ ಭಾವ.

ಆಷಾಢ ಮಾಸದ ಕೊನೆ ಸೋಮವಾರ ನಂದಿಗಿರಿಧಾಮದ ತಪ್ಪಲಲ್ಲಿ ನಡೆದ 78ನೇ ವರ್ಷದ ‘ನಂದಿಗಿರಿ ಪ್ರದಕ್ಷಿಣೆ’ ವೇಳೆ ಕಂಡ ಚಿತ್ರಣವಿದು. ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಶ್ರದ್ಧಾಭಕ್ತಿಯಿಂದ ಹೆಜ್ಜೆ ಹೆಜ್ಜೆಗೂ ಶಿವನಾಮ ಭಜಿಸುತ್ತ  ಜನರು ಸುಮಾರು 15 ಕಿ.ಮೀ ದೂರದ ಪ್ರದಕ್ಷಿಣೆಯನ್ನು ಪೂರೈಸಿದರು.

ಬೆಳಿಗ್ಗೆ 6.30ಕ್ಕೆ ಭೋಗನಂದೀಶ್ವರ ಸ್ವಾಮಿ ದೇಗುಲದಲ್ಲಿ ನಂದಿಗಿರಿ ಪ್ರದಕ್ಷಿಣೆ ಸೇವಾ ಟ್ರಸ್ಟ್ ಪದಾಧಿಕಾರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪ್ರದಕ್ಷಿಣೆಗೆ ಚಾಲನೆ ದೊರೆಯಿತು. 

ಚಿಕ್ಕಬಳ್ಳಾಪುರ, ತುಮಕೂರು, ದೊಡ್ಡಬಳ್ಳಾಪುರ, ಬೆಂಗಳೂರು, ದೇವನಹಳ್ಳಿ, ವಿಜಯಪುರ, ಆಂಧ್ರಪ್ರದೇಶದ ಅನಂತಪುರ, ಹಿಂದೂಪುರ ಮುಂತಾದೆಡೆಯ ಆಸ್ತಿಕರು ಯಾತ್ರೆಯಲ್ಲಿ ಭಾಗವಹಿಸಿದ್ದರು.  ಅಬಾಲವೃದ್ಧರಾದಿ ಯಾಗಿ ಸಾವಿರಾರು ಜನರು ಸಂಭ್ರಮ ದಿಂದ ಸಾಗುತ್ತಿದ್ದರು. ಅನೇಕ ಸಂಘ–ಸಂಸ್ಥೆಗಳ ಸದಸ್ಯರು, ನಾಗರಿಕರು ಉಪಾಹಾರ ಸೇರಿದಂತೆ ಕುಡಿಯುವ ನೀರು, ಬಿಸ್ಕತ್, ಕಲ್ಲುಸಕ್ಕರೆ, ಕರ್ಜೂರ, ಮಜ್ಜಿಗೆ, ಮೊಳಕೆಕಾಳು, ಹಣ್ಣು ನೀಡುವ ಮೂಲಕ ದಣಿವಾರಿಸುವ ಕೆಲಸ
ಮಾಡಿದರು. 

ಪ್ರದಕ್ಷಿಣೆಯ ಮಾರ್ಗ: ಕುಡುವತಿ, ಕಾರಹಳ್ಳಿ ಕ್ರಾಸ್, ನಂದಿ ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಂಧೀಪುರ, ಕಣಿವೆಪುರ, ಸುಲ್ತಾನ್‌ಪೇಟೆ ಮಾರ್ಗವಾಗಿ ಸಾಗಿ ನಂದಿಗಿರಿ, ಗೋಪಿನಾಥಗಿರಿ, ದಿಬ್ಬಗಿರಿ, ಬ್ರಹ್ಮಗಿರಿ ಮತ್ತು ಚನ್ನಗಿರಿಯನ್ನು ಸುತ್ತುವರಿದು ಪುನಃ ಭೋಗನಂದೀ ಶ್ವರನ ಸನ್ನಿಧಿಗೆ ಬಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿ, ಪ್ರಸಾದ ಸ್ವೀಕರಿಸಿದರು.

ಪ್ರದಕ್ಷಿಣೆ ನಡೆಸುವವರಿಗೆ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಅಲ್ಲಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಭಕ್ತರಿಂದ ಉಪಾಹಾರದ ಉಪಕಾರ ಸೇವೆ
ಐದು ದಶಕಗಳಿಂದ ‘ನಂದಿಗಿರಿ ಪ್ರದಕ್ಷಿಣೆ’ಯಲ್ಲಿ ಉಪಾಹಾರ ವ್ಯವಸ್ಥೆ ಮಾಡುತ್ತಿರುವ ದೊಡ್ಡಬಳ್ಳಾಪುರದ ದೇವಾಂಗ ಮಂಡಳಿ ಸದಸ್ಯರು ಈ ಬಾರಿ ಕೂಡ ಆಚಾರ್ಲಹಳ್ಳಿಯಲ್ಲಿ ಕಾಫಿ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಪ್ರದಕ್ಷಿಣೆ ಪೂರ್ಣಗೊಳಿಸಿದವರಿಗೆ ನಂದಿ ದೇವಸ್ಥಾನದ ಬಳಿ ಪೊಂಗಲ್‌, ಮೊಸರನ್ನ, ಪುಲಾವ್ ವಿತರಿಸಿದರು.

‘ನಮ್ಮ ಹಿರಿಯರು 1970ರಲ್ಲಿಯೇ ಸೌಕರ್ಯ ಇಲ್ಲದ ಕಾಲದಲ್ಲಿ ಎತ್ತಿನಗಾಡಿಯಲ್ಲಿ ಬಂದು ಇಲ್ಲಿ ತಿಂಡಿ ವಿತರಿಸುವ ಕೆಲಸ ಮಾಡುತ್ತಿದ್ದರು. ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಅನೇಕ ಭಕ್ತರಿಂದ ಧನ, ಧಾನ್ಯ ಸಂಗ್ರಹಿಸಿ ನಾವು ಈ ಸೇವೆ ಮಾಡುತ್ತೇವೆ. ಈ ಬಾರಿ 14 ಕ್ವಿಂಟಲ್ ಅಕ್ಕಿಯಿಂದ ಉಪಾಹಾರ ಸಿದ್ಧಪಡಿಸಿದ್ದೇವೆ’ ಎಂದು ಮಂಡಳಿಯ ಹಾಲಿ ಅಧ್ಯಕ್ಷ ನಾಗರಾಜ್‌ ತಿಳಿಸಿದರು.

ಕಣಿವೆಪುರದಲ್ಲಿ ಚಿಕ್ಕಬಳ್ಳಾಪುರದ ಹಣ್ಣಿನ ವ್ಯಾಪಾರಿ ಸಿ.ಮಲ್ಲಿಕಾರ್ಜುನ್ ಸಹ ಭಕ್ತರಿಗೆ ಹಣ್ಣು ವಿತರಿಸುತ್ತಿದ್ದರು. ‘25 ವರ್ಷಗಳಿಂದ ಈ ಸೇವೆ ಮಾಡುತ್ತಿದ್ದೇನೆ. ಈ ಹಿಂದೆ ಪಪ್ಪಾಯಿ, ಕಲ್ಲಂಗಡಿ, ಉಪ್ಪಿಟು, ಕಾಫಿ ನೀಡುತ್ತಿದ್ದೆ. ಒಂದೇ ಕಡೆ ಜನದಟ್ಟಣೆಯಾಗುತ್ತದೆ ಎನ್ನುವ ಕಾರಣಕ್ಕೆ ಪಪ್ಪಾಯಿ, ಕಾಫಿ ಬಿಟ್ಟಿದ್ದೇವೆ. ಸದ್ಯ 5 ಟನ್‌ ಕಲ್ಲಂಗಡಿ, 30 ಚೀಲ ರವೆಯ ಉಪ್ಪಿಟ್ಟು ವಿತರಣೆ ಮಾಡುತ್ತಿದ್ದೇವೆ. ಶಿವ ಕೊಟ್ಟಾಗ ಪರರೊಂದಿಗೆ ಹಂಚಿ ತಿನ್ನಬೇಕು ಎನ್ನುವುದು ನನ್ನ ಧ್ಯೇಯ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT