ADVERTISEMENT

ಮಡೆಸ್ನಾನ ಆಯೋಜಕರ ಬಂಧನಕ್ಕೆ ಸಿಪಿಎಂ ಆಗ್ರಹ

ಪಕ್ಷದ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 9:31 IST
Last Updated 9 ಡಿಸೆಂಬರ್ 2013, 9:31 IST

ಚಿಕ್ಕಬಳ್ಳಾಪುರ: ಮಡೆಮಡೆ ಸ್ನಾನ ಪದ್ಧತಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಸಿಪಿಎಂ ಕಾರ್ಯಕರ್ತೆಯರ ಮೇಲೆ ಮಡೆ­ಸ್ನಾನ ಆಯೋಜನಾ ಸಮಿತಿ ಸದಸ್ಯರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಪಕ್ಷದ ಮುಖಂಡರು, ಕಾರ್ಯಕರ್ತರು ನಗರದ ಸುಬ್ರಮಣ್ಯ ದೇವಾಲಯದ ಎದುರು ಭಾನುವಾರ ಸಂಜೆಯಿಂದ ಅನಿರ್ದಿಷ್ಟಾವಧಿ ಧರಣಿ ಕೈಗೊಂಡರು.

ಪಕ್ಷದ ಕಾರ್ಯಕರ್ತೆಯರಾದ ಮಧುಲತಾ, ಲಕ್ಷ್ಮೀದೇವಮ್ಮ ಮುಂತಾದವರ ಜಡೆಗಳನ್ನು ಎಳೆದು ಆಯೋಜನಾ ಸಮಿತಿ ಸದಸ್ಯರು ಹಲ್ಲೆ ನಡೆಸಿದ್ದು, ಅವರನ್ನು ಕೂಡಲೇ ಬಂಧಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

‘ಮಡೆಮಡೆ ಸ್ನಾನ ನಡೆಸುವುದಿಲ್ಲ ಎಂದು ನಂಬಿಸಿ ಆಯೋಜನಾ ಸಮಿತಿಯವರು ನಮ್ಮನ್ನು ಮೋಸ ಮಾಡಿದ್ದಾರೆ ಎಂದು ನಮ್ಮ ಪಕ್ಷದ ಕಾರ್ಯಕರ್ತೆಯರು ದೇವಾಲಯದ ಹೊರಗಡೆ ಪ್ರತಿಭಟನೆ ನಡೆಸಲು ಮುಂದಾದರು.

ಆಗ ಸಿಟ್ಟಿಗೆದ್ದ ಆಯೋಜನಾ ಸಮಿತಿ ಸದಸ್ಯರು ಪಕ್ಷದ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸಿ ಜಡೆಗಳನ್ನು ಮತ್ತು ಉಡುಪುಗಳನ್ನು ಎಳೆದಾಡಿದ್ದಾರೆ. ಹಲ್ಲೆ ಮಾಡಿರುವರನ್ನು ತಕ್ಷಣ ಬಂಧಿಸಬೇಕು. ಪೊಲೀಸರು ಕ್ರಮ ಕೈಗೊಳ್ಳುವವರೆಗೂ  ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.