ADVERTISEMENT

ವಿದ್ಯುತ್ ದರ ಏರಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2011, 10:15 IST
Last Updated 30 ಅಕ್ಟೋಬರ್ 2011, 10:15 IST

ಗುಡಿಬಂಡೆ: ಗೆದ್ದು ಬರುವ ಮೊದಲು ರೈತರಿಗೆ ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಿಸಿದ ಭರವಸೆ ಉಳಿಸಿಕೊಳ್ಳಲು ವಿಫಲಗೊಂಡ ಬಿಜೆಪಿ ಸರ್ಕಾರ ಇದೀಗ ವಿದ್ಯುತ್ ದರ ಏರಿಸುವ ಮೂಲಕ ಜನತೆಗೆ ದುಬಾರಿ ಕೊಡುಗೆ ನೀಡಿದೆ ಎಂದು ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ ಟೀಕಿಸಿದರು.

ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಶನಿವಾರ ಆರಂಭವಾದ ಸಿಪಿಎಂ 5ನೇ ತಾಲ್ಲೂಕು ಸಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನತೆಗೆ ವಿದ್ಯುತ್ ನೀಡದೆ ವಸೂಲಾತಿ ದಂಧೆಗೆ ಬಿಜೆಪಿ ಸರ್ಕಾರ ಇಳಿದಿರುವುದು ದುರದೃಷ್ಟಕರ. ನಮ್ಮನ್ನು ಆಳುತ್ತಿರುವ ಸರ್ಕಾರಗಳಿಗೆ ಜನಹಿತಕ್ಕಿಂತ ಸ್ವಹಿತ ಯೋಜನೆಗಳ ಬಗ್ಗೆ ಆಸಕ್ತಿ ಹೆಚ್ಚು. ದೇಶದ ಸಂಪತ್ತು ಕೊಳ್ಳೆ ಹೊಡೆಯುವ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ? ಎಂಬ ವಿಷಯದಲ್ಲಿ ಬಹುಶಃ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೈಪೋಟಿ ನಡೆಸುತ್ತಿವೆ. 2ಜಿ, ಗಣಿ, ಭೂ ಹಗರಣಗಳ ಒಳಸುಳಿಗಳು ಪೂರ್ಣ ಅನಾವರಣಗೊಳ್ಳುತ್ತವೆ ಎಂದರು.

ದಿನದಿಂದ ದಿನಕ್ಕೆ ಭ್ರಷ್ಟರ ಸಂಖ್ಯೆ ಅಧಿಕವಾಗುತ್ತಿದೆ. ಸಣ್ಣ ಹಗರಣ ಎಂದರೂ ಅದರ ಮೊತ್ತ ಕೋಟ್ಯಂತರ ರೂಪಾಯಿ ಮೀರುತ್ತದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 5 ವರ್ಷಗಳಲ್ಲಿ ದೇಶದ 2.20 ಲಕ್ಷ ರೈತರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರಲ್ಲಿ ಕರ್ನಾಟಕದ ಪಾಲು ಹೆಚ್ಚು. ಇಷ್ಟಾದರೂ ರೈತರಿಗೆ ಮಾರಕವಾದ ಕೃಷಿ ನೀತಿ ಬದಲಾಗಿಲ್ಲ, ಬಂಡವಾಳಶಾಹಿಗಳಿಗೆ ಅನುಕೂಲವಾಗುವ ಭೂ ಕಬಳಿಕೆ, ಖಾಸಗೀಕರಣ, ಉದಾರೀಕರಣ ನಿಂತಿಲ್ಲ ಎಂದು ಹೇಳಿದರು.

ಸಭೆ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸಾವಿತ್ರಮ್ಮ ಮಾತನಾಡಿ, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದು ಪುನಃ ಅವರ ಭೂಮಿಯನ್ನೇ ಕಬಳಿಸಿ ಜೈಲು ಪಾಲಾಗಿರುವ ಜನ ಪ್ರತಿ ನಿಧಿಗಳು, ಅವರ ಪಕ್ಷವನ್ನು ರಾಜ್ಯದ ಜನತೆ ಬಹಿಷ್ಕರಿಸಬೇಕು ಎಂದರು.

ಸಿಪಿಎಂ ಮುಖಂಡರಾದ ಮುನಿವೆಂಕಟಪ್ಪ, ಚೆನ್ನರಾಯಪ್ಪ, ಗಂಗಿರೆಡ್ಡಿ, ಸೋಮೇನಹಳ್ಳಿ ಅಶ್ವತ್ಥಪ್ಪ, ಜಯರಾಮರೆಡ್ಡಿ, ಶಿವಪ್ಪ, ಭೈರಪ್ಪ, ಎಚ್.ಪಿ.ಲಕ್ಷ್ಮೀನಾರಾಯಣ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮುನಿರೆಡ್ಡಿ, ಆದಿನಾರಾಯಣರೆಡ್ಡಿ, ಸಿಐಟಿಯು ಭಾಗ್ಯಮ್ಮ ಭಾಗವಹಿಸಿದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.