ADVERTISEMENT

ವಿಶೇಷ ಪೂಜೆ, ಪ್ರಾರ್ಥನೆಗೂ ಸೋಲದ ವರುಣ:ಆತಂಕ, ಗೊಂದಲದಲ್ಲಿ ರೈತ ಸಮುದಾಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2012, 9:20 IST
Last Updated 25 ಜುಲೈ 2012, 9:20 IST
ವಿಶೇಷ ಪೂಜೆ, ಪ್ರಾರ್ಥನೆಗೂ ಸೋಲದ ವರುಣ:ಆತಂಕ, ಗೊಂದಲದಲ್ಲಿ ರೈತ ಸಮುದಾಯ
ವಿಶೇಷ ಪೂಜೆ, ಪ್ರಾರ್ಥನೆಗೂ ಸೋಲದ ವರುಣ:ಆತಂಕ, ಗೊಂದಲದಲ್ಲಿ ರೈತ ಸಮುದಾಯ   

ಗುಡಿಬಂಡೆ: ಜಿಲ್ಲೆಯ ಅತ್ಯಂತ ಕಿರಿದಾದ ತಾಲ್ಲೂಕು ಗುಡಿಬಂಡೆ. ಇಲ್ಲಿನ ರೈತರ ಸ್ಥಿತಿಗತಿ ಮತ್ತು ಸಂಕಷ್ಟಗಳು ಕಿರಿದಾದುದ್ದಲ್ಲ. ತಾಲ್ಲೂಕಿನಲ್ಲಿ ಮಳೆಯಾಗದೇ ಕಂಗಾಲಾಗಿರುವ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲಾಗದೇ  ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. 

  ಈಗ ರೈತರಲ್ಲಿ ಮಳೆಯಾಗುವುದೇ ಅಥವಾ ಇಲ್ಲವೇ ಎಂಬ ಅನಿಶ್ಚಿತತೆ ಕಾಡುತ್ತಿದೆ.
 ಜೂನ್-ಜುಲೈ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಂಡು ಇತರ ಚಟುವಟಿಕೆಗೆ ರೈತರು ಮುಂದಾಗಬೇಕಿತ್ತು.
 ಕೃಷಿ ಬಿಟ್ಟು ಬೇರೇನೂ ಗೊತ್ತಿಲ್ಲದ ಇವರು ಬೇರೆಡೆ ವಲಸೆ ಹೋಗಲಾಗದೇ ಗ್ರಾಮದಲ್ಲಿಯೇ ಇರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಾದರೆ, ಒಂದಿಷ್ಟು ಸಮಸ್ಯೆಗಳಾದರೂ ನಿವಾರಣೆಯಾಗುತ್ತವೆ ಎಂಬ ಆಶಾಭಾವನೆಯಲ್ಲಿ ಬದುಕುತ್ತಿದ್ದಾರೆ.

ಕಣ್ಣಾಮುಚ್ಚಾಲೆ ಆಡುತ್ತ ಮುನಿಸಿಕೊಂಡಿರುವ ಮಳೆರಾಯನ ಕರುಣೆ ಕೋರಲು ಇಲ್ಲಿನ ರೈತರು ಮಾಡಿರು ಪೂಜೆ ಒಂದೆರಡಲ್ಲ.ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿದರಲ್ಲದೇ ಪುರಾತನ ಕಾಲದ ಗ್ರಾಮದೇವರುಗಳಲ್ಲಿಯೂ ತೆರಳಿ ವಿಶೇಷ ಪ್ರಾರ್ಥನೆ ಮೂಲಕ ಮಳೆಗಾಗಿ ಬೇಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯನ್ನು ನಂಬಿ ಕೆಲ ರೈತರು ಜಮೀನಿನ ಉಳುಮೆ ಮಾಡಿದರು.

ಬಿತ್ತನೆ ಕಾರ್ಯಕ್ಕೂ ಮುಂದಾದರು. ಆದರೆ ಸರಿಯಾದ ಸಮಯಕ್ಕೆ ಮಳೆರಾಯ ಕೈಕೊಟ್ಟ ಕಾರಣ ಕೃಷಿ ಚಟುವಟಿಕೆಯನ್ನು ಮುಂದು ವರಿಸಲಾಗದೇ ಮತ್ತು ಪರಿಹಾರ ಕಂಡುಕೊಳ್ಳಲಾಗದೇ ನಾವು ಆತಂಕದಲ್ಲಿದ್ದೇವೆ~ ಎಂದು ಯಲ್ಲೋಡು ಗ್ರಾಮದ ವೆಂಕಟರೋಣಪ್ಪ ತಿಳಿಸಿದರು.

ಕೃಷಿ ಇಲಾಖೆಯ ಪ್ರಕಾರ, ಜೂನ್ ಅಂತ್ಯದ ವೇಳೆಗೆ 197.3 ಮಿ.ಮೀ.ಗಳಷ್ಟು ಮಳೆಯಾಗಬೇಕಿತ್ತು.
ಆದರೆ ಕೇವಲ 96.7 ಮಿ.ಮೀ.ಗಳಷ್ಟು ಮಾತ್ರವೇ ಮಳೆಯಾಗಿದೆ. ಜುಲೈಯಲ್ಲಿ 103 ಮಿ.ಮೀ.ಗಳಷ್ಟು ಆಗಬೇಕಿದ್ದ ಮಳೆ 21.07 ಮಿ.ಮೀ.ಗೆ ಸೀಮಿತವಾಗಿದೆ. 13,500 ಹೆಕ್ಟರ್‌ನಷ್ಟು ಬಿತ್ತನೆ ಪ್ರದೇಶವಿದ್ದು, 2,300ಗಳಷ್ಟು ಜಮೀನಿನಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಶೇ 15ರಷ್ಟು ಮಾತ್ರವೇ ಬಿತ್ತನೆಯಾಗಿದೆ.

`ತಾಲ್ಲೂಕಿನ ಬುಳ್ಳಸಂದ್ರ, ಚೌಟಕುಂಟಹಳ್ಳಿ, ವರ‌್ಲಕೊಂಡ, ಸೋಮೇಶ್ವರ ಮತ್ತು ಪೋಲಂಪಲ್ಲಿ ಗ್ರಾಮಗಳಲ್ಲಿ ಬಿತ್ತೆನೆ ಕಾರ್ಯ ಆರಂಭಗೊಂಡಿದೆ. ಉಳಿದ ಹಳ್ಳಿಗಳಲ್ಲಿ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗಿದೆ. ಜುಲೈ  ನಾಲ್ಕನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ~ ಎಂದು ಸಹಾಯಕ ಕೃಷಿ ನಿರ್ದೇಶಕ ನರಸರಾಜ್ ತಿಳಿಸಿದರು.

ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ (ಹೆಕ್ಟೆರ್)
ತಾಲ್ಲೂಕು                      ಗುರಿ        ಸಾಧನೆ

ಚಿಕ್ಕಬಳ್ಳಾಪುರ                18795   200

ಚಿಂತಾಮಣಿ                  33120   2661-

ಗೌರಿಬಿದನೂರು             38275   1710

ಶಿಡ್ಲಘಟ್ಟ                     16435   123

ಬಾಗೇಪಲ್ಲಿ                   32865   755

ಗುಡಿಬಂಡೆ                   13510   707

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT