ADVERTISEMENT

ಶಾಶ್ವತ ನೀರಾವರಿಗೆ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:05 IST
Last Updated 9 ಏಪ್ರಿಲ್ 2012, 9:05 IST

ಶಿಡ್ಲಘಟ್ಟ: ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಜನಾಂದೋಲನ ನಡೆಸಬೇಕು ಎಂದು ಶಾಸಕ ವಿ.ಮುನಿಯಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕುಂಬಾರಹಳ್ಳಿಯಲ್ಲಿ ಶನಿವಾರ ರೂ.22ಲಕ್ಷ ವೆಚ್ಚದಲ್ಲಿ ಮ್ಲ್ಲಲೋಜನಕುಂಟೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಬರಗಾಲ ಎದುರಿಸುತ್ತಿದ್ದು ಸರ್ಕಾರ ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.

ಈ ಹಿಂದೆ ಬರಪೀಡಿತ ಜಿಲ್ಲೆಗಳಿಗೆ ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ನೇತ್ರಾವತಿ ನದಿ ನೀರು ಹರಿಸಲು ವಿಶೇಷ ಯೋಜನೆ ರೂಪಿಸಿ ಸಮೀಕ್ಷೆಗಾಗಿ ಅಗತ್ಯ ಅನುದಾನ ನೀಡಿದ್ದನ್ನು ಹೊರತುಪಡಿಸಿದರೆ; ತದ ನಂತರ ಬಂದ ಅಸ್ಥಿರ ಸರ್ಕಾರಗಳು ಯೋಜನೆ ಅನುಷ್ಠಾನಗೊಳಿಸಲು ಆಸಕ್ತಿ ಹೊಂದಿಲ್ಲ ಎಂದರು.

ತಾಲ್ಲೂಕಿನ 69 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಬಂದಿದ್ದು 35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ಗ್ರಾಮಗಳಲ್ಲಿ ಕೊಳವೆಬಾವಿ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಹಿರಿಯ ಮುಖಂಡ ಸಾದಲಿ ಜಯಪ್ರಕಾಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕದಿರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎನ್.ವೇಣುಗೋಪಾಲ್, ಸದಸ್ಯ ರಾಜಣ್ಣ, ಸಮೀಉಲ್ಲಾ, ಚಂದ್ರಪ್ಪ,  ವೆಂಕಟರೆಡ್ಡಿ, ಪ್ರಸನ್ನ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮರೆಡ್ಡಿ, ತಹಶೀಲ್ದಾರ್ ಎಲ್.ಭೀಮಾನಾಯ್ಕ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಸುಬ್ರಾನಾಯಕ್, ಪಂಚಾಯತ್‌ರಾಜ್ ಇಲಾಖೆ ಎಂಜಿನಿಯರ್ ನಾಗಪ್ಪ, ಸಹಾಯಕ ಎಂಜಿನಿಯರ್ ಕೇಶವಮೂರ್ತಿ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಶ್ರೀನಿವಾಸ್‌ರೆಡ್ಡಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.