ADVERTISEMENT

ಶಾಸಕರ ಊರಲ್ಲೇ ಮೊಳಗಿದ 'ರಣಕಹಳೆ'

ಗೆಲುವಿಗೆ ಶ್ರಮಿಸಿದವರಿಂದಲೇ ಕ್ಷೇತ್ರ ಬಿಟ್ಟು ಓಡಿಸುವ ಶಪಥ; ಚರ್ಚೆಗೆ ಎಡೆಮಾಡಿಕೊಟ್ಟ ಪೇರೆಸಂದ್ರದ ಸಮಾವೇಶ

ಈರಪ್ಪ ಹಳಕಟ್ಟಿ
Published 13 ಮಾರ್ಚ್ 2018, 7:29 IST
Last Updated 13 ಮಾರ್ಚ್ 2018, 7:29 IST
ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶಿಸಿದ ನವೀನ್ ಕಿರಣ್ ಮತ್ತು ಜಿ.ಎಚ್. ನಾಗರಾಜ್
ರ‍್ಯಾಲಿ ಮೂಲಕ ಶಕ್ತಿ ಪ್ರದರ್ಶಿಸಿದ ನವೀನ್ ಕಿರಣ್ ಮತ್ತು ಜಿ.ಎಚ್. ನಾಗರಾಜ್   

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾ ವಣೆ ಸಮೀಪಿಸುತ್ತಿದ್ದಂತೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ತುರುಸಿನ ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಶಾಸಕ ಡಾ.ಕೆ.ಸುಧಾಕರ್ ಸ್ವಗ್ರಾಮ ಪೇರೆಸಂದ್ರದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ವಿ.ನವೀನ್ ಕಿರಣ್ ಮತ್ತು ಜಿ.ಎಚ್.ನಾಗರಾಜ್ ತಮ್ಮ ಬೆಂಬಲಿಗರ ಸಮಾವೇಶ ನಡೆಸಿದರು. ಅಲ್ಲಿ ಅವರು ಆಡಿರುವ ಮಾತುಗಳನ್ನು ಗಮನಿಸಿದರೆ ಕಣ ಹಿಂದೆಂದಿಗಿಂತಲೂ ಹೆಚ್ಚು ರಂಗೇರುವ ಸಾಧ್ಯತೆಯನ್ನು ಸ್ಪಷ್ಟಪಡಿಸಿವೆ.

ಕಾಂಗ್ರೆಸ್ ಟಿಕೆಟ್ ಕೇಳಿ ಅರ್ಜಿ ಸಲ್ಲಿಸಿರುವ ನವೀನ್ ಕಿರಣ್ ಅವರು ಸಮಾವೇಶದಲ್ಲಿ ‘ಶಾಸಕರ ಸರ್ವಾಧಿಕಾರಿ ಧೋರಣೆ ಕಡೆಗಾಣಿಸ ಬೇಕು’ ಎಂದು ಒತ್ತಿ ಒತ್ತಿ ಹೇಳಿದ್ದು ಅವರೊಳಗಿನ ‘ಜಿದ್ದು’ ಎತ್ತಿ ತೋರಿಸಿತ್ತು.

ADVERTISEMENT

ಇದೇ ವೇಳೆ ಅವರು ‘ಈ ಬಾರಿ ನವೀನ್ ಕಿರಣ್ ಅವರಿಗೆ ಟಿಕೆಟ್ ಕೊಡದೆ ಹೋದರೆ ಈ ಭಾಗದಲ್ಲಿ ಕಾಂಗ್ರೆಸ್ ಸೋತು ಹೋಗುತ್ತದೆ ಎನ್ನುವ ಸಂದೇಶ ಕಾಂಗ್ರೆಸ್ ವರಿಷ್ಠರಿಗೆ ಹೋಗಬೇಕಿದೆ’ ಎಂದು ಹೇಳಿದ್ದು ಈ ಬಾರಿ ಅವರು ಸುಧಾಕರ್ ಅವರು ‘ಪ್ರಬಲ’ ಎದುರಾಳಿಯಾಗುವ ಮುನ್ಸೂಚನೆ ನೀಡಿದಂತಿತ್ತು.

ಪ್ರಜಾವಾಣಿ ಮತ್ತು ದಕ್ಷ್ ಸಂಸ್ಥೆ ಸಹಯೋಗದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ನಮ್ಮ ಶಾಸಕರಿಗೆ 223ನೇ ಸ್ಥಾನ ದೊರೆತಿದೆ. ಇದರಿಂದಲೇ ಚಿಕ್ಕಬಳ್ಳಾಪುರ ಮಾನ ಯಾವ ಮಟ್ಟಿಗೆ ಬಂದಿದೆ ಎಂಬುದು ತಿಳಿಯುತ್ತದೆ. ಇದನ್ನು ಹೋಗಲಾಡಿಸಬೇಕೇ ಬೇಡವೆ? ಅಂತಹವರಿಗೆ ಟಿಕೆಟ್ ಕೊಟ್ಟರೆ ಮುಂದೆ ಆಗುವ ಪರಿಣಾಮವೇನು ಎಂಬುದಾಗಿ ವರಿಷ್ಠರನ್ನು ಪ್ರಶ್ನಿಸುತ್ತೇನೆ ಎಂದು ನವೀನ್ ಕಿರಣ್ ಹೇಳಿಕೆ ಪಕ್ಷದ ಮುಖಂಡರ ವಲಯಲದಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಕಾಂಗ್ರೆಸ್ ಮುಖಂಡ ಜಿ.ಎಚ್.ನಾಗರಾಜ್, ‘ನಾನು ಮತ್ತು ನವೀನ್ ಕಿರಣ್ ಬೇರೆಡೆಯಿಂದ ಬಂದವರು, ಅವರನ್ನು ಊರು ಬಿಡಿಸಿ ಓಡಿಸುತ್ತೇನೆ ಎಂದು ಶಾಸಕರು ಹೇಳುವರು. ಆದರೆ ಅವರು ಈ ಹಿಂದೆ ಎಲ್ಲಿದ್ದರು? ಪ್ರತಿ ಹಳ್ಳಿಗೆ ಹೋಗಿ ನಿಮ್ಮ ಅನಾಚಾರ, ದುರಾಚಾರದ ಬಗ್ಗೆ ತಿಳಿಸಿ, ಲಂಚಗುಳಿತನ ಹೋಗಲಾಡಿಸುತ್ತೇವೆ. ಅವರನ್ನು ಊರು ಬಿಟ್ಟು ಓಡಿಸುವುದೇ ನಮ್ಮ ಧ್ಯೇಯ’ ಎಂದು ಗುಡುಗಿದ್ದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.

ಆಗ ಮಿತ್ರರು, ಈಗ ಶತ್ರುಗಳು
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರ ‘ಕೃಪಾಕಟಾಕ್ಷ’ದಿಂದ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಡಾ.ಕೆ.ಸುಧಾಕರ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ನಂದಿ ಆಂಜನಪ್ಪ ಮತ್ತು ಇತರರು ಹುಬ್ಬೇರಿಸುವಂತೆ ಮಾಡಿದ್ದರು.

ಚುನಾವಣೆಯ ಸಂದರ್ಭದಲ್ಲಿ ಕಚ್ಚಾಡುವುದು ಸರಿಯಲ್ಲ ಎಂದು ವರಿಷ್ಠರು ಹೇಳಿದ ಬುದ್ಧಿಮಾತಿಗೆ ಬೆಲೆಕೊಟ್ಟು ಅನೇಕ ಮುಖಂಡರು ಸುಧಾಕರ್ ಅವರನ್ನು ಬೆಂಬಲಿಸಿದ್ದರು. ಪ್ರಚಾರದಲ್ಲಿ ತೊಡಗಿಸಿಕೊಂಡು ಗೆಲುವಿಗೆ ಶ್ರಮಿಸಿದ್ದರು. ಅವರಲ್ಲಿ ಈಗ ಬಂಡೆದ್ದಿರುವ ನವೀನ್ ಕಿರಣ್ ಮತ್ತು ನಾಗರಾಜ್ ಕೂಡ ಪ್ರಮುಖರು.

ರಾಜಕೀಯ ಮತ್ತು ಸ್ವ ಹಿತಾಸಕ್ತಿಗಳು ಕಳೆದ ಐದು ವರ್ಷಗಳಲ್ಲಿ ಈ ಮಿತ್ರರ ನಡುವೆ ಕಡು ವೈಷಮ್ಯ ಬೆಳೆಸಿದ್ದು, ಅದೀಗ ಅಂತಿಮಘಟ್ಟ ಮುಟ್ಟಿ ಸ್ಫೋಟಗೊಂಡಿದೆ. ನಮ್ಮನ್ನು ಕಡೆಗಣಿಸಿದವರಿಗೆ ತಕ್ಕಪಾಠ ಕಲಿಸಬೇಕೆಂದು ಹೊರಟವರು ತಮ್ಮ ಹೋರಾಟದ ಮೊದಲ ಬೀಜವನ್ನು ಶಾಸಕರ ಊರಿನಲ್ಲೇ ಊರಿದ್ದು, ಸಹಜವಾಗಿಯೇ ಇಡೀ ಕ್ಷೇತ್ರದ ತುಂಬಾ ಸಂಚಲನ ಮೂಡಿಸಿದೆ.

‘ಸುಧಾಕರ್ ಮಿತ್ರ ದ್ರೋಹಿ. ಎಲ್ಲರ ಸಹಕಾರದಿಂದ ಗೆದ್ದಿದ್ದರು. ಹಿಂದಿನದನ್ನೆಲ್ಲ ಮರೆತು ಪಕ್ಷವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ಅವರು ನನ್ನ ವಯಸ್ಸು, ಅನುಭವಕ್ಕೆ ಬೆಲೆ ನೀಡಲಿಲ್ಲ. ಪ್ರತಿಯೊಂದು ಅಧಿಕಾರವನ್ನು ತಮ್ಮ ಹಿಂಬಾಲಕರಿಗೆ ಕೊಟ್ಟು ನಮ್ಮನ್ನು ಕಡೆಗಣಿಸಿದರು’ ಎಂದು ನಾಗರಾಜ್‌ ಅಸಮಾಧಾನ ತೋಡಿಕೊಂಡಿದ್ದಾರೆ. ಇದು ಪಕ್ಷದ ಒಳ ಜಗಳವನ್ನು ಬೀದಿಗೆ ತಂದಿದೆ.

ಟೀಕಿಸಿದವರಿಗೆ ಪರೋಕ್ಷ ಚಾಟಿ
ಒಂದೆಡೆ ಸಮಾವೇಶದಲ್ಲಿ ನವೀನ್ ಕಿರಣ್ ಮತ್ತು ನಾಗರಾಜ್ ಅವರ ಆರೋಪಗಳ ಸುರಿಮಳೆ ನಡೆಸಿದರು. ಇನ್ನೊಂದೆಡೆ ಶಾಸಕ ಡಾ.ಕೆ.ಸುಧಾಕರ್ ಅವರು ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ, ‘ಯಾರೊಬ್ಬರು ನನಗೆ ಹಣ ಕೊಟ್ಟಿದ್ದು ಸಾಬೀತು ಮಾಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಸಂಬಂಧಗಳು ಮನುಷ್ಯರಿಗೆ ಅರ್ಥವಾಗುತ್ತವೆ. ಮೃಗಗಳಿಗಲ್ಲ’ ಎನ್ನುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ಚಾಟಿ ಬೀಸಿದ್ದಾರೆ.

‘ನನ್ನ ಕ್ಷೇತ್ರ ವ್ಯಾಪ್ತಿಯ ಹಳ್ಳಿ ಮತ್ತು ನಗರಕ್ಕೆ ಬೇಕಾಗಿದ್ದುದನ್ನೆಲ್ಲ ಮಾಡಿರುವೆ. ಇವತ್ತು ಅನೇಕರು ಹೊಟ್ಟೆಪಾಡಿಗಾಗಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾರೆ. ಅವರಲ್ಲಿ ನನಗೆ ಯಾವ ಶಿಕ್ಷಣ ಭೀಷ್ಮನೂ ಕಣ್ಣಿಗೆ ಕಾಣಿಸಿಲ್ಲ. ಯಾರು ಎಷ್ಟು ಸರ್ಕಾರಿ ಜಾಗ ಅತಿಕ್ರಮಿಸಿಕೊಂಡಿದ್ದಾರೆ ಎಂದು ಗೊತ್ತು. ಶಿಶುಪಾಲನಿಗೆ ಶ್ರೀಕೃಷ್ಣ ಕೊಟ್ಟ ಹಾಗೆ ನಾನೂ 60 ದಿನ ಸಮಯ ನೀಡುವೆ. ಅಷ್ಟರಲ್ಲಿ ಏನು ಬೇಕಾದರೂ ಹೇಳಿಕೊಳ್ಳಿ. ಆ ಮೇಲೆ ಆಟ ಆಡೋಣ’ ಎಂದು ಸವಾಲೊಡ್ಡಿದ್ದಾರೆ.

*
ಸದ್ಯ ಕ್ಷೇತ್ರದಲ್ಲಿ ನಡೆದಿರುವ ಈ ಬೆಳವಣಿಗೆ ಬಗ್ಗೆ ಹೈಕಮಾಂಡ್‌ಗೆ ವರದಿ ಸಲ್ಲಿಸಿರುವೆ. ಹೈಕಮಾಂಡ್‌ನಿಂದ ಬರುವ ಸೂಚನೆಯಂತೆ ಕ್ರಮಕೈಗೊಳ್ಳುತ್ತೇವೆ.
-ಕೆ.ಎನ್.ಕೇಶವರೆಡ್ಡಿ,
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.