ADVERTISEMENT

ಸಂಘಗಳ ಏಳಿಗೆಗೆ ನೌಕರರು ಕೈಜೋಡಿಸಿ

ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೊದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 12:32 IST
Last Updated 10 ಆಗಸ್ಟ್ 2019, 12:32 IST
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಿ ಗೌರವಿಸಲಾಯಿತು.   

ಚಿಕ್ಕಬಳ್ಳಾಪುರ: ‘ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಸಂಘಗಳ ಏಳಿಗೆಗೆ ಕೈಜೋಡಿಸುವ ಜತೆಗೆ ಹಾಲಿನ ಗುಣಮಟ್ಟ ಕಾಯ್ದುಕೊಳ್ಳಲು ಶ್ರಮಿಸಬೇಕು’ ಎಂದು ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಎನ್.ಸಿ.ವೆಂಕಟೇಶ್ ಹೇಳಿದರು.


ನಗರದಲ್ಲಿ ಶನಿವಾರ ನಡೆದ ವಿಶ್ವೇಶ್ವರಯ್ಯ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೊದ್ದೇಶ ಸಹಕಾರ ಸಂಘದ 2018–19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ, 5ನೇ ವಾರ್ಷಿಕೋತ್ಸವ, ನಿವೃತ್ತಿ ಸಿಬ್ಬಂದಿ ಸನ್ಮಾನ, ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ಇವತ್ತು ನಂದಿನಿ ಹಾಲು ಗುಣಮಟ್ಟದ ಕಾರಣದಿಂದ ದೇಶದಲ್ಲಿ ಅಷ್ಟೇ ಅಲ್ಲದೆ ಹೊರ ದೇಶಗಳಿಗೂ ರಪ್ತು ಮಾಡಲಾಗುತ್ತಿದೆ. ಹಾಲು ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ನಂದಿನಿ ಹಾಲು ಹಾಗೂ ಅದರ ಉತ್ಪನ್ನಗಳು ಕಡಿಮೆ ಬೆಲೆ ದೊರೆಯುತ್ತವೆ. ಪ್ರತಿಯೊಬ್ಬರು ನಂದಿನಿ ಉತ್ಪನ್ನಗಳನ್ನು ಬಳಸಿದರೆ ಪರೋಕ್ಷವಾಗಿ ರೈತರಿಗೆ ಬೆಂಬಲ ನೀಡಿದಂತಾಗುತ್ತದೆ’ ಎಂದರು.

ADVERTISEMENT


ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಿ.ಎಸ್.ಅರೀಫುಲ್ಲಾ ಆಸೀಫ್‌ ಮಾತನಾಡಿ, ‘ಸಹಕಾರ ಸಂಘಗಳು ಸೆ.25ರ ಒಳಗೆ ವಾರ್ಷಿಕ ಸಾಮಾನ್ಯ ಸಭೆ ಮುಗಿಸಿ ಸಭೆಯ ನಡಾವಳಿ, ಹಾಜರಾತಿ ಪುಸ್ತಕದ ನಕಲು ಪ್ರತಿಗಳನ್ನು ಸಹಾಯಕ ನಿಬಂಧಕರ ಕಚೇರಿಗೆ ತಲುಪಿಸಬೇಕು. ವಾರ್ಷಿಕ ಸಭೆ ನಡೆಸದ ಸಂಘಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದರು.


ಎಂಪಿಸಿಎಸ್ ನೌಕರರ ಸಹಕಾರ ಸಂಘದ ಅಧ್ಯಕ್ಷ ಎಂ.ರಾಮಕೃಷ್ಣ ರೆಡ್ಡಿ ಮಾತನಾಡಿ, ‘ಸಹಕಾರ ಸಂಘಗಳ ಸಿಬ್ಬಂದಿ ಮರಣ ಹೊಂದಿದರೆ ಸಂಘದ ವತಿಯಿಂದ ಅವರ ಕುಟುಂಬಕ್ಕೆ ಸಹಾಯಧನ ನೀಡಲಾಗುತ್ತದೆ. ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಒಕ್ಕೂಟ ಸಂಘಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಬೆಂಗಳೂರು ಒಕ್ಕೂಟದ ಮಾದರಿಯಲ್ಲಿ ಕನಿಷ್ಠ ಇಡಿಗಂಟು ಮೊತ್ತ ನೀಡಬೇಕು’ ಎಂದು ಒತ್ತಾಯಿಸಿದರು.


ಸಭೆಯಲ್ಲಿ ಹಿಂದಿನ ಸಭೆಯ ನಡವಳಿಕೆ, ಸಂಘದ ಆಡಳಿತ ವರದಿ, 2018–19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಓದಿ ಅಂಗೀಕರಿಸಲಾಯಿತು. 2019–20ನೇ ಸಾಲಿನ ಆಯವ್ಯಯಕ್ಕೆ ಮಂಜೂರಾತಿ ಪಡೆದುಕೊಳ್ಳಲಾಯಿತು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.


ಕೋಚಿಮುಲ್ ಚಿಕ್ಕಬಳ್ಳಾಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಪಾಪೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ.ನಾರಾಯಣಸ್ವಾಮಿ, ಮುಖ್ಯಕಾರ್ಯನಿರ್ವ ಹಣಾಧಿಕಾರಿ ಎ.ಎಂ.ಬಚ್ಚರೆಡ್ಡಿ, ಸಂಘದ ನಿರ್ದೇಶಕರು, ಸದ್ಯಸರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.