ADVERTISEMENT

ಸಂಚಲನ ಮೂಡಿಸಿದ ‘ಓಂಶಕ್ತಿ’ ಪ್ರವಾಸ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 8:43 IST
Last Updated 24 ಡಿಸೆಂಬರ್ 2017, 8:43 IST

ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಅವರು ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ 55 ಬಸ್‌ಗಳ ಮೂಲಕ ನಗರದ ಸುಮಾರು 2,500 ಮಹಿಳೆಯರನ್ನು ತಮಿಳುನಾಡಿನ ಮೇಲ್‌ಮರುವತ್ತೂರಿನ ಆದಿಪರಾಶಕ್ತಿ (ಓಂಶಕ್ತಿ) ದರ್ಶನಕ್ಕೆ ಕಳುಹಿಸಿಕೊಟ್ಟರು.

ಪ್ರತಿಯೊಬ್ಬ ಮಹಿಳೆಗೂ ಕೆಂಪು ಬಣ್ಣದ ಸೀರೆಯನ್ನು ನೀಡುವ ಜತೆಗೆ ಎಲ್ಲರಿಗೂ ಉಚಿತ ಊಟ, ತಿಂಡಿ, ವಸತಿ ವ್ಯವಸ್ಥೆ ಮಾಡಲಾಗಿದೆ. ನಗರದ 31 ವಾರ್ಡ್‌ಗಳಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಮನೆ ಮನೆಗೆ ಭೇಟಿ ನೀಡಿ ಓಂಶಕ್ತಿ ಪ್ರವಾಸಕ್ಕೆ ಬರುವ ಆಸಕ್ತರ ಪಟ್ಟಿ ಸಿದ್ಧಪಡಿಸುವ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಜಿಲ್ಲೆಯಲ್ಲಿ ಇಂತಹ ಪುಣ್ಯಕ್ಷೇತ್ರಗಳ ದರ್ಶನ ‘ಭಾಗ್ಯ’ದ ‘ಉಚಿತ ಪ್ರವಾಸ’ಗಳು ಸಂಚಲನ ಮೂಡಿಸಲು ಆರಂಭಿಸಿವೆ. ಜಿಲ್ಲೆಯಲ್ಲಿ ರಾಜಕಾರಣಿಗಳು ಓಂಶಕ್ತಿ ಪ್ರವಾಸ ಆಯೋಜಿಸುವುದು ಹೊಸತಲ್ಲವಾದರೂ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವುದರಿಂದ ಹಿಂದೆಂದಿಗಿಂತಲೂ ಈ ಬಾರಿ ರಾಜಕಾರಣಿಗಳಲ್ಲಿ ‘ಭಕ್ತಿ ಪರಾಕಾಷ್ಠೆ’ ಗರಿಗೆದರುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯ ರಾಜಕಾರಣ ಬಲ್ಲವರು.

ADVERTISEMENT

ಈ ಹಿಂದಿನ ಕೆಲ ಚುನಾವಣೆಗಳಲ್ಲಿ ಉಚಿತ ಪ್ರವಾಸಗಳ ಆಯೋಜಿಸಿದವರು ದಕ್ಕಿಸಿಕೊಂಡ ‘ಅಧಿಕಾರ ಭಾಗ್ಯ’ವನ್ನು ಕಂಡವರು ಮತದಾರರನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಲು ಇದೇ ಸರಿಯಾದ ಮಾರ್ಗವೆಂದು ಅರಿತು ಭಕ್ತಿಯನ್ನೇ ‘ಬಂಡವಾಳ’ ಮಾಡಿಕೊಳ್ಳುವ ಉದ್ದೇಶದಿಂದ ಓಂಶಕ್ತಿ ನಾಮ ಜಪಿಸಲು ಆರಂಭಿಸಿದ್ದಾರೆ.

ಅತ್ತ ಶಿಡ್ಲಘಟ್ಟದಲ್ಲಿ ಜೆಡಿಎಸ್ ಟಿಕೆಟ್‌ ಆಕಾಂಕ್ಷಿಯಾಗಿರುವ ಮೇಲೂರು ರವಿಕುಮಾರ್ ಅವರು ಕೂಡ ಓಂಶಕ್ತಿ ದರ್ಶನ, ಶಬರಿ ಮಲೆ ಯಾತ್ರೆಗಳನ್ನು ಆಯೋಜಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೊಂದೆಡೆ ಬಾಗೇಪಲ್ಲಿ ಕ್ಷೇತ್ರದಲ್ಲಿ ಶಾಸಕ ಸುಬ್ಬಾರೆಡ್ಡಿ, ಚಿಂತಾಮಣಿಯಲ್ಲಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರು ಕೂಡ ಪ್ರವಾಸಗಳ ಆಯೋಜನೆಯ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಅನೇಕ ವರ್ಷಗಳಿಂದ ಇಂತಹ ಪ್ರವಾಸಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗರೇಕಾಲುವೆ ನಾರಾಯಣ ಸ್ವಾಮಿ ಅವರು ಸಹ ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಚುನಾವಣೆ ಕಣಕ್ಕೆ ಇಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅವರು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ‘ಭಕ್ತ’ರಿಗೆ ಧಾರ್ಮಿಕ ಕ್ಷೇತ್ರಗಳ ಉಚಿತ ‘ದರ್ಶನ ಭಾಗ್ಯ’ ಕಲ್ಪಿಸಲು ಉದ್ದೇಶಿಸಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಜಿಲ್ಲೆಯ ಆರು ತಾಲ್ಲೂಕುಗಳ ಪೈಕಿ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿಯಾಗಿ ಕಾಣುವ ಧಾರ್ಮಿಕ ಪ್ರವಾಸ ಅಣಿಗೊಳಿಸುವ ಈ ‘ಭಕ್ತಿಸೇವೆ’ಗೆ ಭವಿಷ್ಯದ ಜನಸೇವಕನನ್ನು ಮತದಾರರ ಮನದಾಳದಲ್ಲಿ ನೆಲೆಗೊಳಿಸುವ ಶಕ್ತಿ ಇದೆ ಎನ್ನುತ್ತಾರೆ ಅನುಭವಿಗಳು.

ಆಣೆ ಮಾಡಿದರೆ ಪ್ರವಾಸ!

’ಮುಂಬರುವ ಚುನಾವಣೆಯಲ್ಲಿ ಸುಧಾಕರ್ ಅವರಿಗೆ ನಾವು ಮತ ಹಾಕುತ್ತೇವೆ’ ಎಂದು ಪ್ರವಾಸಕ್ಕೆ ಬಂದವರಿಂದ ಪ್ರಮಾಣ ಮಾಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಕೆಲ ಜನರು ಅಸಮಾಧಾನಗೊಂಡು ಪ್ರವಾಸಕ್ಕೆ ತೆರಳದೆ ಮನೆಗೆ ವಾಪಸ್‌ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು. ಈ ಆರೋಪವನ್ನು  ಪ್ರವಾಸದ ಆಯೋಜಕರು ಅಲ್ಲಗಳೆದಿದ್ದಾರೆ.

* * 

ನಾವು, ನಮ್ಮ ನಾಯಕರು ಸೇರಿ ಓಂಶಕ್ತಿ ಪ್ರವಾಸಕ್ಕೆ ಹೊರಟವರಿಗೆ ಸಹಕಾರ ಕೊಟ್ಟಿದ್ದೇವೆ. ಅವರೊಂದಿಗೆ ನಾವು ಹೋಗಿ ಆ ತಾಯಿ ಆಶೀರ್ವಾದ ಪಡೆಯುತ್ತೇವೆ.
ಡಾ.ಕೆ.ಸುಧಾಕರ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.