ADVERTISEMENT

ಸಮಾನತೆ ಸಾರಿದ ನಿಡುಮಾಮಿಡಿ ಮಠ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 8:26 IST
Last Updated 7 ಸೆಪ್ಟೆಂಬರ್ 2013, 8:26 IST

ಬಾಗೇಪಲ್ಲಿ: ಸಮಾಜದ ಎಲ್ಲಾ ವರ್ಗಗಳು ಒಂದೇ ಎಂದು ಸಾರುವ ಹಲವು ಕಾರ್ಯಕ್ರಮ ಮಾಡಲಾಗಿದೆ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಗೂಳೂರಿನ ಮಾನವ ಧರ್ಮಪೀಠ ನಿಡುಮಾಮಿಡಿ ಮಹಾಸಂಸ್ಥಾನದಲ್ಲಿ ಶುಕ್ರವಾರ ನಡೆದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಮಠದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳು ಸೇರಿದಂತೆ ಎಲ್ಲಾ ವರ್ಗಗಳ 700 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಊಟ ಕಲ್ಪಿಸಲಾಗಿದೆ. ಮಠದಲ್ಲಿ ದಲಿತ ಅರ್ಚಕರನ್ನು ಹಾಗೂ ಊಟ ಸಿದ್ಧಪಡಿಸಲು ದಲಿತರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ನನ್ನ ವಿರುದ್ಧ ಮಠದ ಹಿರಿಯ ಸ್ವಾಮೀಜಿಗೆ ದೂರು ನೀಡಿದ್ದರು ಎಂದರು. 

ಈ ಹಿಂದೆ ಅಹಿಂದ ಹೋರಾಟ ದಮನ ಮಾಡಲು ವಿವಿಧ ಬಗೆ ತಂತ್ರ ನಡೆಸಿದರು. ನನಗೆ ಆಸೆ, ಆಮಿಷ, ಬೆದರಿಕೆಗಳು ಬಂದವು. ವೀರಶೈವ ಪೀಠಾಧ್ಯಕ್ಷರನ್ನಾಗಿ ಮಾಡುವ ಆಸೆಯೂ ಒಡ್ಡಿದ್ದರು. ರೂಪದರ್ಶಿ ಯುವತಿಯನ್ನು ನನ್ನ ಮಠಕ್ಕೆ ಕಳುಹಿಸಿದ್ದರು ಎಂದರು.
ದಲಿತರ ಕೇರಿಯಲ್ಲಿ ಸುತ್ತಾಡುವ ಪೇಜಾವರ ಮಠದ ಸ್ವಾಮೀಜಿ ದಲಿತರ ಮನೆಗಳಲ್ಲಿ ಏಕೆ ಊಟ ಮಾಡುವುದಿಲ್ಲ, ದಲಿತರನ್ನು ಏಕೆ ಸಮಾನರಾಗಿ ಕಾಣುವುದಿಲ್ಲ ಎಂದು ಪ್ರಶ್ನಿಸಿದರು.

ನಿಧಿಗಳ್ಳರ ಕಾಟ: ರಾಜ ಮಹಾರಾಜರ ಕಾಲದಲ್ಲಿ ಅನೇಕರು ಪೂಜಿಸುತ್ತಿದ್ದ ಪ್ರಾಚೀನ ಶಿಲ್ಪಗಳ ಕೆಳಗೆ ನಿಧಿ ಇರಬಹುದು ಎಂದು ಕಳ್ಳರು ಮಠದ ಆವರಣದಲ್ಲಿ ಅಗೆದಿದ್ದಾರೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಠದ ಪಾವಿತ್ರ್ಯ ಹಾಳಾಗುತ್ತಿದೆ ಎಂದರು.

ಜಿಲ್ಲಾ ಮಕ್ಕಳ ಸಮಿತಿ ಜಿಲ್ಲಾಧ್ಯಕ್ಷ ಎ.ಜಿ.ಸುಧಾಕರ್, ಮುಖಂಡರಾದ ಚೆಂಡೂರು ವೆಂಕಟೇಶ್, ಬಿ.ಆರ್.ನರಸಿಂಹನಾಯ್ಡು,
ಕೆ.ಎಂ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT