ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತಿ ಹೆಚ್ಚು ಗಣಿಗಾರಿಕೆಯ ಚಟುವಟಿಕೆಗಳು ನಡೆಯುತ್ತಿರುವ ಜಿಲ್ಲೆಗಳನ್ನು ಪಟ್ಟಿ ಮಾಡಿದರೆ ಚಿಕ್ಕಬಳ್ಳಾಪುರವು ಸಹ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಭವಿಷ್ಯದಲ್ಲಿ ಕಲ್ಲುಗಣಿಗಾರಿಕೆಯ ವಿಷಯದಲ್ಲಿ ಚಿಕ್ಕಬಳ್ಳಾಪುರವೇ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ.
ಯಾವುದೇ ರೀತಿಯ ಗಣಿಗಾರಿಕೆ ನಡೆಸಲು ಕಂದಾಯ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಕಡ್ಡಾಯ. ಹೀಗೆ ಕಟ್ಟಡ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಗೆ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣೆ ಕೋರಿರುವ ಅರ್ಜಿ ಸಂಖ್ಯೆಯಲ್ಲಿ ಚಿಕ್ಕಬಳ್ಳಾಪುರ ಮೊದಲ ಸ್ಥಾನದಲ್ಲಿ ಇದೆ.
ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು 2023ರ ನಿಯಮ 8–ಬಿ ಅನ್ವಯ ನಿರ್ದಿಷ್ಟವಲ್ಲದ ಉಪ ಖನಿಜ (ಕಟ್ಟಡ ಕಲ್ಲು) ಮತ್ತು ನಿರ್ದಿಷ್ಟಪಡಿಸಿದ ಉಪ ಖನಿಜ (ಗ್ರಾನೈಟ್) ಗಣಿಗಾರಿಕೆ ನಡೆಸಲು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ನಿರಾಕ್ಷೇಪಣೆ ಪತ್ರ ಕಡ್ಡಾಯ.
ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸಲು ಒಟ್ಟು 501 ಅರ್ಜಿಗಳು ನಿರಾಕ್ಷೇಪಣೆ ಕೋರಿವೆ. ಇವುಗಳಲ್ಲಿ 8 ಅರ್ಜಿಗಳು ಸ್ವೀಕೃತವಾಗಿವೆ. 493 ಅರ್ಜಿಗಳು ಬಾಕಿ ಇವೆ. ಅದೇ ರೀತಿ ಗ್ರಾನೈಟ್ ಗಣಿಗಾರಿಕೆ ನಡೆಸಲು ನಿರಾಕ್ಷೇಪಣೆ ಕೋರಿ 205 ಅರ್ಜಿಗಳು ಇಲಾಖೆ ಮುಂದಿವೆ. ಈ ಪೈಕಿ 8 ಅರ್ಜಿಗಳು ಸ್ವೀಕೃತಗೊಂಡಿವೆ. 197 ಅರ್ಜಿಗಳು ಬಾಕಿ ಇವೆ.
ಕಟ್ಟಡ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಗೆ ನಿರಾಕ್ಷೇಪಣೆ ಕೋರಿರುವ ಒಟ್ಟು 690 ಅರ್ಜಿ ಈ ಎರಡೂ ಇಲಾಖೆಗಳ ಮುಂದೆ ಬಾಕಿ ಇವೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿರುವ ಮತ್ತು ನಿರಾಕ್ಷೇಪಣೆಗೆ ಅರ್ಜಿಗಳು ಬಾಕಿ ಇರುವ ಜಿಲ್ಲೆ ಚಿಕ್ಕಬಳ್ಳಾಪುರ.
ಜಿಲ್ಲೆಯಲ್ಲಿ ಸದ್ಯ 136 ಕಟ್ಟಡ ಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ. ಈಗ 501 ಅರ್ಜಿಗಳು ಮತ್ತೆ ಕಟ್ಟಡ ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣೆ ಕೋರಿವೆ. ಒಂದು ವೇಳೆ ಈ ಅರ್ಜಿಗಳಿಗೆ ಅನುಮತಿ ದೊರೆತರೆ ಜಿಲ್ಲೆಯ ಬೆಟ್ಟ ಗುಡ್ಡಗಳಲ್ಲಿ ದೊಡ್ಡ ಮಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಯಲಿದೆ. ಬೆಟ್ಟ ಗುಡ್ಡಗಳು ಕರಗಲಿವೆ.
ಚಿಕ್ಕಬಳ್ಳಾಪುರ ಹೊರತುಪಡಿಸಿದರೆ ತುಮಕೂರು, ರಾಮನಗರ, ಬಳ್ಳಾರಿ ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ನಿರಾಕ್ಷೇಪಣೆ ಕೋರಿರುವ ಅರ್ಜಿಗಳ ಸಂಖ್ಯೆ 100 ದಾಟಿದೆ. ಗ್ರಾನೈಟ್ ಗಣಿಗಾರಿಕೆಯಲ್ಲಿ ಚಿಕ್ಕಬಳ್ಳಾಪುರವೇ ಪ್ರಮುಖ ಸ್ಥಾನದಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಅರ್ಜಿಗಳ ಸಂಖ್ಯೆ 100ರ ಒಳಗಿದೆ.
ಅರಣ್ಯ ಮತ್ತು ಕಂದಾಯ ಇಲಾಖೆ ಎದುರು ನಿರಾಕ್ಷೇಪಣೆಗೆ ಕೋರಿರುವ ಅರ್ಜಿಗಳಿಗೆ ಮುಕ್ತಿ ದೊರೆತು ಕಟ್ಟಡ ಕಲ್ಲು ಮತ್ತು ಗ್ರಾನೈಟ್ ಗಣಿಗಾರಿಕೆಯ ಚಟುವಟಿಕೆಗಳು ಜಿಲ್ಲೆಯಲ್ಲಿ ಆರಂಭವಾದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಮೇಲೆ ಗಣಿಗಾರಿಕೆಯ ಕಾರ್ಮೋಡಗಳು ಮತ್ತಷ್ಟು ತೀವ್ರವಾಗಲಿವೆ.
ಬೆಂಗಳೂರಿನ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಜಲ್ಲಿ, ಎಂ.ಸ್ಯಾಂಡ್, ಕಲ್ಲುಗಳನ್ನು ಪೂರೈಸುವ ಜಿಲ್ಲೆ ಚಿಕ್ಕಬಳ್ಳಾಪುರ. ರಾಜ್ಯದಲ್ಲಿಯೇ ಪ್ರಸಿದ್ಧವಾದ ನಂದಿಗಿರಿಧಾಮದ ಸುತ್ತಲೇ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆಗಳು ನಡೆಯುತ್ತಿವೆ. ನಂದಿಗಿರಿಧಾಮ ಇರುವ ನಂದಿ ಹೋಬಳಿ ವ್ಯಾಪ್ತಿಯಲ್ಲಿಯೇ 20 ಕಲ್ಲುಕ್ವಾರಿಗಳು ಮತ್ತು 7 ಕ್ರಷರ್‌ಗಳು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು ನಡೆಯುತ್ತಿವೆ.
ಬೆಂಗಳೂರಿನ ಕಟ್ಟಡ ನಿರ್ಮಾಣಕ್ಕೆ ಅತಿ ಹೆಚ್ಚು ಕಚ್ಛಾ ಸಾಮಗ್ರಿಗಳು ಚಿಕ್ಕಬಳ್ಳಾಪುರದಿಂದ ಪೂರೈಕೆ ಆಗುತ್ತಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಉದ್ಯಮಿಗಳು ಸಹ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸಲು ಮುಂದಾಗಿದ್ದಾರೆ. ಈ ಕಾರಣದಿಂದ ಗಣಿಗಾರಿಕೆಗೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಅರ್ಜಿಗಳು ಇಲಾಖೆ ಮುಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.