ADVERTISEMENT

ಚಿಕ್ಕಬಳ್ಳಾಪುರ: 74 ಮದ್ಯದಂಗಡಿಗಳ ವಹಿವಾಟು ಆರಂಭ

ನಗರ ಪ್ರದೇಶಗಳಲ್ಲಿ 22 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 52 ವೈನ್‌ಶಾಪ್‌ಗಳ ವಹಿವಾಟು

​ಪ್ರಜಾವಾಣಿ ವಾರ್ತೆ
Published 4 ಮೇ 2020, 7:55 IST
Last Updated 4 ಮೇ 2020, 7:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ತಿಂಗಳ ಬಳಿಕ ಜಿಲ್ಲೆಯಲ್ಲಿ ಸೋಮವಾರ ಆಯ್ದ ಮದ್ಯದಂಗಡಿಗಳು ಬಾಗಿಲು ತೆರೆದು ವಹಿವಾಟು ಆರಂಭಿಸಿದ್ದು, ಮದ್ಯಕ್ಕಾಗಿ ಗ್ರಾಹಕರು ಮುಗಿಬಿದ್ದ ಚಿತ್ರಣ ಗೋಚರಿಸುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋಮವಾರದಿಂದ ಮದ್ಯ ಮಾರಾಟಕ್ಕೆ ಷರತ್ತು ಬದ್ಧ ಅವಕಾಶ ನೀಡಿದ್ದು, ಜಿಲ್ಲೆಯಲ್ಲಿ ಇಂದಿನಿಂದ 74 ಮದ್ಯದಂಗಡಿಗಳು ವ್ಯಾಪಾರ ಶುರುವಿಟ್ಟುಕೊಂಡಿವೆ.

ಜಿಲ್ಲೆಯಲ್ಲಿ 69 ಸಿಎಲ್‌–2( ಚಿಲ್ಲರೆ ಮದ್ಯದಂಗಡಿಗಳು– ವೈನ್‌ಶಾಪ್‌ ಹಾಗೂ ಎಂ.ಆರ್.ಪಿ ಮದ್ಯದಂಗಡಿ) ಮತ್ತು 21 ಸಿಎಲ್‌–11ಸಿ (ಎಂಎಸ್ಐಎಲ್) ಸೇರಿದಂತೆ ಒಟ್ಟು 90 ಮದ್ಯದಂಗಡಿ ತೆರೆಯಲು ಗುರುತಿಸಲಾಗಿತ್ತು.

ADVERTISEMENT

ಆದರೆ, ಕೊನೆಯ ಕ್ಷಣದಲ್ಲಿ ಜಿಲ್ಲಾಡಳಿತ ಕೋವಿಡ್ ಪ್ರಕರಣಗಳು ಪತ್ತೆಯಾದ ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ನಗರಗಳ ವ್ಯಾಪ್ತಿಯಲ್ಲಿನ 16 ಮದ್ಯದಂಗಡಿ ತೆರೆಯುವ ತೀರ್ಮಾನವನ್ನು ಕಾಯ್ದಿರಿಸಿದ್ದು, ಈ ಬಗ್ಗೆ ಚರ್ಚಿಸಲು ಸೋಮವಾರ ಅಧಿಕಾರಿಗಳ ಸಭೆ ಕರೆಯಲಾಗಿದೆ.

ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿರುವ 32 ಸಿಎಲ್‌–2 ಮದ್ಯದಂಗಡಿಗಳ ಪೈಕಿ ಸದ್ಯ 19, ಅದೇ ರೀತಿ ಎಂಎಸ್ಐಎಲ್‌ನ 6 ಮಳಿಗೆಗಳ ಪೈಕಿ 3 ಅಂಗಡಿಗಳು ವಹಿವಾಟು ಆರಂಭಿಸಿವೆ.

ಇನ್ನುಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 37 ಸಿಎಲ್-2, 15 ಎಂಎಸ್ಐಎಲ್‌ ಮಳಿಗೆಗಳು ವ್ಯಾಪಾರ ಆರಂಭಿಸಿವೆ.
ಮದ್ಯದಂಗಡಿಗಳು ಬೆಳಿಗ್ಗೆ 9ರಿಂದ ವಹಿವಾಟು ಆರಂಭಿಸಿದವು. ಅದಕ್ಕೂ ಮುಂಚಿತವಾಗಿಯೇ ಗ್ರಾಹಕರು ಮದ್ಯಕ್ಕಾಗಿ ಮಳಿಗೆಗಳತ್ತ ದೌಡಾಯಿಸಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದದ್ದು ಕಂಡುಬಂತು.

ಮದ್ಯದಗಡಿಗಳಲ್ಲಿ ಗ್ರಾಹಕರು 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಗುಂಪುಗೂಡುವಂತಿಲ್ಲ ಮುಂತಾದ ಷರತ್ತುಗಳು ಅನೇಕ ಅಂಗಡಿಗಳ ಬಳಿ ಪಾಲನೆಯಾಗುತ್ತಿಲ್ಲ.

ಗ್ರಾಹಕರ ನಿಯಂತ್ರಣಕ್ಕೆ, ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕೆ ಸಾಕಷ್ಟು ಮದ್ಯದಂಗಡಿಗಳ ಬಿಳಿಬಣ್ಣದಲ್ಲಿ ಚೌಕದ ಮಾರ್ಕ್ ಮಾಡಲಾಗಿದೆ. ಕೆಲವೆಡೆ ಕಂಬಗಳನ್ನು ನೆಟ್ಟು ತಡೆಬೇಲಿ ಕೂಡ ಅಳವಡಿಸಲಾಗಿದೆ.

ಮದ್ಯ ಖರೀದಿಗೆ ಮಿತಿ

ಸರ್ಕಾರದ ನಿಯಮದಂತೆ ಮದ್ಯದಂಗಡಿಗಳಲ್ಲಿ ಒಬ್ಬರು ಏಕಕಾಲದಲ್ಲಿ ಗರಿಷ್ಠ 2.3 ಲೀಟರ್‌ (ವಿಸ್ಕಿ, ರಮ್, ಜಿನ್‌) ಮದ್ಯ ಹಾಗೂ 18 ಲೀಟರ್‌ ಬಿಯರ್‌ ಖರೀದಿಸಬಹುದು. ಆದರೆ, ’ಸದ್ಯದ ಸ್ಥಿತಿಯಲ್ಲಿ ಅಷ್ಟು ಪ್ರಮಾಣದಲ್ಲಿ ಕೊಡಲು ಆಗುವುದಿಲ್ಲ. ಸ್ಥಳೀಯ ದಾಸ್ತಾನು, ಪರಿಸ್ಥಿತಿಗೆ ಅನುಗುಣವಾಗಿ ಮಾರಾಟ ಮಾಡುತ್ತೇವೆ‘ ಎನ್ನುತ್ತಾರೆ ಅಬಕಾರಿ ಇಲಾಖೆ ಉಪ ಆಯುಕ್ತ ನರೇಂದ್ರಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.