ADVERTISEMENT

3 ವರ್ಷದಲ್ಲಿ 76 ಅಕ್ರಮ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 4:58 IST
Last Updated 2 ಮಾರ್ಚ್ 2021, 4:58 IST
ಹಿರಿಯ ವಿಜ್ಞಾನಿ ಕೆ.ಎಂ.ನಂಜುಂಡಸ್ವಾಮಿ
ಹಿರಿಯ ವಿಜ್ಞಾನಿ ಕೆ.ಎಂ.ನಂಜುಂಡಸ್ವಾಮಿ   

ಚಿಕ್ಕಬಳ್ಳಾಪುರ: ಗುಡುಬಂಡೆ ತಾಲ್ಲೂಕಿನ ಹಿರೇನಾಗವಲ್ಲಿ ಗ್ರಾಮದ ಬಳಿ ಐದು ದಿನಗಳ ಹಿಂದೆ ಸಂಭವಿಸಿದ ಜಿಲೆಟಿನ್‌ ಸ್ಫೋಟ ಆರು ಜೀವಗಳನ್ನು ಬಲಿಪಡೆದಿದೆ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಈ ಘಟನೆಯ ನಂತರ ಅಕ್ರಮ ಗಣಿಗಾರಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಹಿರೇನಾಗವಲ್ಲಿ ಘಟನೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ಘಟಕ, ಕ್ರಷರ್‌ ಮತ್ತು ಎಂ–ಸ್ಯಾಂಡ್‌ ತಯಾರಿಕಾ ಘಟಕಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಹಿರಿಯ ವಿಜ್ಞಾನಿ ಕೆ.ಎಂ.ನಂಜುಂಡಸ್ವಾಮಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಸಂಬಂಧ ಎಷ್ಟು ಪ್ರಕರಣಗಳು ದಾಖಲಾಗಿವೆ?

ADVERTISEMENT

2018–19, 2019–20, 2020–21 ಈ ಮೂರು ವರ್ಷಗಳಲ್ಲಿ ಅನಧಿಕೃತ ಗಣಿಗಾರಿಕೆ ಸಂಬಂಧ ಒಟ್ಟು 76 ಪ್ರಕರಣ ದಾಖಲಾಗಿವೆ. ₹3.6 ಲಕ್ಷ ದಂಡ ವಸೂಲಿ ಮಾಡಲಾಗಿದೆ. 55 ವಾಹನ ಜಪ್ತಿ ಮಾಡಲಾಗಿದೆ. ಅಕ್ರಮ ಸಾಗಾಣಿಕೆಗೆ ಸಂಬಂಧಿಸಿ 203 ವಾಹನಗಳನ್ನು ಪತ್ತೆ ಹಚ್ಚಿದ್ದೇವೆ. ₹82 ಲಕ್ಷ ದಂಡ ವಿಧಿಸಿದ್ದೇವೆ.

ಹಾಗಾದರೆ ಹಿರೇನಾಗವಲ್ಲಿ ದುರಂತ ಹೇಗೆ ಸಂಭವಿಸಿತು?

–ಭ್ರಮರವಾಸಿನಿ ಕಲ್ಲು ಕ್ವಾರಿ, ಕ್ರಷರ್‌ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸೇರುತ್ತದೆ. ಸ್ಫೋಟ ನಡೆದ ಪ್ರದೇಶ ವರ್ಲಕೊಂಡವು ಗುಡಿಬಂಡೆ ತಾಲ್ಲೂಕಿಗೆ ಸೇರಿದೆ. ಗುತ್ತಿಗೆ ಪ್ರದೇಶದಿಂದ ಹೊರಗಡೆ ಒಂದೂವರೆ ಕಿ.ಮೀ ದೂರದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಘಟನೆ ನಡೆದಿದೆ. ಆ ಪ್ರದೇಶವನ್ನು ಈ ಹಿಂದೆ ಗಣಿಗಾರಿಕೆಗೆ ನೀಡಲಾಗಿತ್ತು. ಆದರೆ, ಗುತ್ತಿಗೆದಾರರ ಪರವಾನಗಿ ಪೂರ್ಣಗೊಂಡಿತ್ತು. ಬಳಿಕ ಯಾರಿಗೂ ಗುತ್ತಿಗೆ ನೀಡಿರಲಿಲ್ಲ.

ಶಿವಮೊಗ್ಗ ಜಿಲ್ಲೆ ಹುಣಸೋಡು ದುರಂತದ ಬಳಿಕ ಜಿಲ್ಲೆಯಲ್ಲಿ ಯಾವೆಲ್ಲ ಕ್ರಮ ಕೈಗೊಂಡಿದ್ದೀರಿ?

– ಶಿವಮೊಗ್ಗದ ಹುಣಸೋಡು ದುರಂತದ ಬೆನ್ನಲ್ಲೇ ಜಿಲ್ಲೆಯ ಎಲ್ಲ ಕಲ್ಲು ಕ್ವಾರಿ, ಗಣಿ ಗುತ್ತಿದಾರರೊಂದಿಗೆ ಸಭೆ ನಡೆಸಲಾಗಿತ್ತು. ಜೊತೆಗೆ, ಸ್ಫೋಟಕಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಗುತ್ತಿಗೆದಾರರಿಗೆ ಮಾಹಿತಿ ನೀಡಲು ಬೆಂಗಳೂರಿನಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ತಜ್ಞರನ್ನು ಕರೆಸಿ ವಿಶೇಷ ಕಾರ್ಯಾಗಾರ ನಡೆಸಲಾಗಿತ್ತು.

ಗುತ್ತಿಗೆ ನೀಡುವ ಮಾನದಂಡಗಳೇನು?

ಕರ್ನಾಟಕ ಉಪ ಖನಿಜ ರಿಯಾಯಿತಿ 1994, 2016ರ ತಿದ್ದುಪಡಿ ನಿಯಮವಳಿ ಆಧಾರದ ಮೇಲೆ ಅರ್ಜಿದಾರರಿಗೆ (ಗುತ್ತಿಗೆದಾರರಿಗೆ) ಕಲ್ಲು ಗಣಿಗಾರಿಕೆಗೆ ನೀಡಲಾಗುತ್ತದೆ.

ಸ್ಫೋಟಕ ಸಂಗ್ರಹದ ಬಗ್ಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲವೇ?

– ಸ್ಫೋಟಕ ಸಂಗ್ರಹ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ಪೊಲೀಸ್‌ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಗುತ್ತಿಗೆದಾರರಿಗೆ ಪರವಾನಗಿ ನೀಡುವುದಷ್ಟೆ ನಮ್ಮ ಇಲಾಖೆಯ ಕೆಲಸವಾಗಿದೆ.

176ಕ್ಕೆ ಪರವಾನಗಿ 61 ಗಣಿ ನಿಷ್ಕ್ರಿಯ

ಜಿಲ್ಲೆಯಲ್ಲಿ ಕ್ರಷರ್, ಕಲ್ಲು ಗಣಿಗಾರಿಕೆ ನಡೆಸಲು ನೀಡಲಾಗಿರುವ ಒಟ್ಟು ಪರವಾನಗಿ 176. ಸಕ್ರಿಯವಾಗಿರುವ 113 ಗಣಿ ಮತ್ತು ಕ್ರಷರ್‌ 113. ನಿಷ್ಕ್ರಿಯವಾಗಿರುವ ಗಣಿಗಳ ಸಂಖ್ಯೆ 61.

ಚಿಕ್ಕಬಳ್ಳಾಪುರದಲ್ಲಿ 107, ಬಾಗೇಪಲ್ಲಿಯಲ್ಲಿ 16, ಚಿಂತಾಮಣಿಯಲ್ಲಿ15, ಗುಡಿಬಂಡೆಯಲ್ಲಿ 26, ಗೌರಿಬಿದನೂರಿನಲ್ಲಿ 3 ಹಾಗೂ ಶಿಡ್ಲಘಟ್ಟ 7 ಗಣಿಗಳು ಸಕ್ರಿಯವಾಗಿವೆ.

ರಾಜಕೀಯ ಹಸ್ತಕ್ಷೇಪ ಇಲ್ಲ...

ಗಣಿಗಾರಿಕೆಯಲ್ಲಿ ರಾಜಕೀಯ ಹಸ್ತಕ್ಷೇಪದ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ನಂಜುಂಡಸ್ವಾಮಿ ಅವರು ಉತ್ತರಿಸಿದ್ದು ಹೀಗೆ...
‘ಜಿಲ್ಲೆಯಲ್ಲಿ ನಾಲ್ಕು ಜನ ಭೂ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದು, ಅವರಿಗೆ ತಾಲ್ಲೂಕುವಾರು ಹಂಚಿಕೆಗಳನ್ನು ಮಾಡಲಾಗಿರುತ್ತದೆ. ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಲ್ಲು ಕ್ವಾರಿ, ಕ್ರಷರ್‌ಗಳಿಗೆ ಭೇಟಿ ನೀಡಿ ಪ್ರತಿನಿತ್ಯ ಪರಿಶೀಲನೆ ನಡೆಸುತ್ತಿರುತ್ತಾರೆ. ಇದುವರೆಗೂ ಯಾವುದೇ ರಾಜಕೀಯ ಹಸ್ತಕ್ಷೇಪ ಕಂಡುಬಂದಿಲ್ಲ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.