ADVERTISEMENT

ನಗರಕ್ಕಿಂತಲೂ ಹಳ್ಳಿಯಲ್ಲೇ ಮತದಾನಕ್ಕೆ ಉತ್ಸಾಹ

ಗ್ರಾಮೀಣ ಪ್ರದೇಶದಲ್ಲಿ ಶೇ87.28, ನಗರ ವ್ಯಾಪ್ತಿಯಲ್ಲಿ ಶೇ79.62 ಮತದಾನ, ನಂದಿ ಹೋಬಳಿಯಲ್ಲಿ ಅತಿ ಹೆಚ್ಚಿನ ಮತದಾರರಿಂದ ಹಕ್ಕು ಚಲಾವಣೆ

ಈರಪ್ಪ ಹಳಕಟ್ಟಿ
Published 8 ಡಿಸೆಂಬರ್ 2019, 2:10 IST
Last Updated 8 ಡಿಸೆಂಬರ್ 2019, 2:10 IST
.
.   

ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನಕ್ಕೆ ನಗರ ನಿವಾಸಿಗಳಿಗಿಂತಲೂ ಗ್ರಾಮೀಣ ಪ್ರದೇಶದ ಮತದಾರರೇ ಹೆಚ್ಚಿನ ಉತ್ಸಾಹ ತೋರಿಸಿದ್ದಾರೆ.

ಕಳೆದ (2018) ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ 88.6ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣ ಶೇ 86.84ಕ್ಕೆ ಏರಿಕೆಯಾಗಿದೆ. ಇದರಲ್ಲಿ ಹಳ್ಳಿಯ ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಾಗಿ ಕಂಡುಬಂದಿದೆ. ಹೆಚ್ಚಿನ ಶಿಕ್ಷಿತರು, ಪ್ರಜ್ಞಾವಂತರನ್ನು ಒಳಗೊಂಡ ನಗರ ಪ್ರದೇಶದಲ್ಲಿ ಹಳ್ಳಿಗಳಿಗಿಂತಲೂ ಹೆಚ್ಚಿನ ಹಣದ ಹೊಳೆ ಹರಿದಿದೆ ಎನ್ನುವ ವಂದತಿ ಇದೆ. ಆದರೆ ಮತದಾನದ ಪ್ರಮಾಣ ಮಾತ್ರ ಗ್ರಾಮೀಣ ಪ್ರದೇಶಕ್ಕಿಂತ ಕಡಿಮೆ ದಾಖಲಾಗಿದೆ.

ಕ್ಷೇತ್ರದಲ್ಲಿ 2,00,220 ಮತದಾರರು ಇದ್ದರು. ಉಪ ಚುನಾವಣೆಯಲ್ಲಿ ಈ ಪೈಕಿ 87,732 ಪುರುಷರು, 86,135 ಮಹಿಳೆಯರು, ಮೂರು ತೃತೀಯ ಲಿಂಗಿಗಳು ಸೇರಿದಂತೆ 1,73,870 ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿರುವ ಹೋಬಳಿಗಳ ಪೈಕಿ ನಂದಿ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ (ಶೇ90.22) ಮತದಾನವಾಗಿದೆ. ನಗರ ವ್ಯಾಪ್ತಿಯ 31 ವಾರ್ಡ್‌ಗಳ ಪೈಕಿ ಇರುವ 53 ಮತಗಟ್ಟೆಗಳಲ್ಲಿ ಶೇ79.62 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ ಶೇ80.94 ರಷ್ಟು ಪುರುಷರು, ಶೇ78.93 ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ.

ADVERTISEMENT

ಕಸಬಾ, ಮಂಡಿಕಲ್ಲು, ನಂದಿ ಮತ್ತು ಮಂಚೇನಹಳ್ಳಿ ಹೋಬಳಿಗಳನ್ನು ಒಳಗೊಂಡಂತೆ ಗ್ರಾಮೀಣ ಪ್ರದೇಶದಲ್ಲಿ 75,395 ಪುರುಷರು, 75,310 ಮಹಿಳೆಯರು, 7 ತೃತೀಯ ಲಿಂಗಿಗಳು ಸೇರಿದಂತೆ 1,50,712 ಮತದಾರರು ಇದ್ದಾರೆ. ಇವರಲ್ಲಿ 68,748 ಪುರುಷರು, 65,959 ಮಹಿಳೆಯರು ಸೇರಿದಂತೆ 1.34.707 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ 24,054 ಪುರುಷರು, 25,439 ಮಹಿಳೆಯರು, 15 ತೃತೀಯಲಿಂಗಿಗಳು ಸೇರಿದಂತೆ 49,508 ಮತದಾರರಿದ್ದಾರೆ. ಅವರಲ್ಲಿ 19,341 ಪುರುಷರು, 20,079 ಮಹಿಳೆಯರು ಸೇರಿದಂತೆ 39,420 ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದಿದ್ದಾರೆ.

ಈಗಾಗಲೇ ಕ್ಷೇತ್ರದ ಮತದಾರರು ಡಿ.5 ರಂದು ಮತಯಂತ್ರದ ಗುಂಡಿ ಒತ್ತುವ ಮೂಲಕ ಸ್ಪರ್ಧಾ ಕಣದಲ್ಲಿದ್ದ ಒಂಬತ್ತು ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂನಲ್ಲಿ ಭದ್ರಪಡಿಸಿದ್ದಾರೆ. ಸ್ಪರ್ಧಾ ಕಣದ ಪ್ರಮುಖ ಹುರಿಯಾಳುಗಳು ಆಗಿರುವ ಬಿಜೆಪಿಯ ಅಭ್ಯರ್ಥಿ ಡಾ.ಕೆ.ಸುಧಾಕರ್, ಕಾಂಗ್ರೆಸ್‌ ಅಭ್ಯರ್ಥಿ ಎಂ.ಅಂಜನಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ನಡುವೆ ಈ ಚುನಾವಣೆ ತೀವ್ರ ಪೈಪೋಟಿ ಒಡ್ಡಿತ್ತು.

ಮತದಾನ ಮಾಡಿರುವ 1.73 ಲಕ್ಷ ಮತದಾರರ ಒಲವು ಯಾರತ್ತ ಹೆಚ್ಚು ವಾಲಿದೆ ಎನ್ನುವುದು ಸದ್ಯ ತೀವ್ರ ಕುತೂಹಲ ಹುಟ್ಟಿಸಿದೆ.
ನಗರದ ಬಿ.ಬಿ.ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿಯಲ್ಲಿ ಸೋಮವಾರ (ಡಿ.9) ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ನಂತರ ಜನತಾ ನ್ಯಾಯಾಲಯದ ತೀರ್ಪು ಸ್ಪಷ್ಟವಾಗಿ ಗೋಚರವಾಗಲಿದೆ.

ಅಂಕಿಅಂಶಗಳು..

ಉಪ ಚುನಾವಣೆ ಚಿತ್ರಣ

99,449-ಪುರುಷರು

1,00,749-ಮಹಿಳೆಯರು

22-ತೃತೀಯ ಲಿಂಗಿಗಳು

2,00,220-ಒಟ್ಟು ಮತದಾರರು

ಶೇ 86.84-ಒಟ್ಟಾರೆ ಮತದಾನ ಪ್ರಮಾಣ

ಶೇ88.22- ಮತ ಚಲಾಯಿಸಿದ ಪುರುಷರು

ಶೇ85.49- ಮತ ಚಲಾಯಿಸಿದ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.