ADVERTISEMENT

ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮುಖ್ಯಮಂತ್ರಿ ರಾಜ್ಯದ ಜನರ ಕ್ಷಮೆ ಕೇಳಲಿ: ಎಎಪಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:48 IST
Last Updated 26 ಜುಲೈ 2022, 5:48 IST
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟಿಸಿದರು
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಆಮ್ ಆದ್ಮಿ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟಿಸಿದರು   

ಚಿಕ್ಕಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೋಲಾರದ ಮಾಜಿ ಸಂಸದ ಡಾ.ವೆಂಕಟೇಶ್ ಮಾತನಾಡಿ, ಬಿಜೆಪಿಯ ಜನವಿರೋಧಿ ಧೊರಣೆಗಳಿಂದ ಜನಸಾಮಾನ್ಯರ ಬದುಕು ನೆಲಕ್ಕಚ್ಚಿದ್ದು, ಹಿಂದೆ ಬ್ರಿಟಿಷರು ಉಪ್ಪಿಗೆ ಸುಂಕ ವಿಧಿಸಿದಂತೆ ಪ್ರಸ್ತುತ ಬಿಜೆಪಿ ಸರ್ಕಾರ ತಿನ್ನುವ ಅನ್ನಕ್ಕೂ ಸುಂಕವನ್ನು ವಿಧಿಸುತ್ತಿರುವುದು ವಿಷಾದನೀಯ ಎಂದು ಆರೋಪಿಸಿದರು.

ಬ್ರಿಟಿಷರೇ ಭಾರತದಿಂದ ತೊಲಗಿ ಎಂದು ಚಳವಳಿ ಮಾಡಲಾಯಿತು. ಇದೀಗ ಬಿಜೆಪಿಯವರೇ ಅಧಿಕಾರದಿಂದ ತೊಲಗಿ ಎಂದು ಚಳವಳಿ ಮಾಡಬೇಕಾಗಿದೆ. ಈಗಾಗಲೇ ಪೆಟ್ರೋಲ್, ಗ್ಯಾಸ್, ಕಟ್ಟಡ ಸಾಮಗ್ರಿಗಳ ದರ ಏರಿಕೆ ಮುಂತಾದವುಗಳಿಂದ ತತ್ತರಿಸುತ್ತಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಅವರು ತಿನ್ನುವ ಅನ್ನ, ಹಾಲು, ಮೊಸರಿಗೆ ತೆರಿಗೆ ಹಾಕಿ ಅವರ ಜೀವನವನ್ನೇ ದುರ್ಬರ ಮಾಡುತ್ತಿರುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ADVERTISEMENT

ಮೊಸರು, ಮಜ್ಜಿಗೆ ಮೇಲಿನ ಜಿಎಸ್‌ಟಿ ಸಂಬಂಧಿಸಿ ತಪ್ಪು ಮಾಹಿತಿ ನೀಡಿ ಜನರನ್ನು ವಂಚಿಸಿದ್ದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಿ.ಎಂ ಹೇಳಿರುವಂತೆ, ಅವೆರಡರ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರವು ಕೆಎಂಎಫ್‌ಗೆ ವಾಪಸ್ ನೀಡುವುದು ನಿಜವಾಗಿದ್ದರೆ, ಮಾರುಕಟ್ಟೆಯಲ್ಲಿ ಮೊಸರು, ಮಜ್ಜಿಗೆಯ ಬೆಲೆ ಏರಿಕೆಯಾಗಿದ್ದೇಕೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜನರಿಗೆ ತಪ್ಪು ಮಾಹಿತಿ ನೀಡಿದ್ದು ಖಂಡನೀಯ ಎಂದು ಕಿಡಿಕಾರಿದರು.

ಮೋದಿ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ವಿಪರೀತ ಹೆಚ್ಚಿಸಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಮೇಲೆ ಕಡಿಮೆಯಾಗಿದ್ದರೂ ಭಾರತೀಯರಿಗೆ ಅದರ ಲಾಭ ಸಿಗುತ್ತಿಲ್ಲ. ಅಡುಗೆ ಅನಿಲದ ಸಬ್ಸಿಡಿಯನ್ನು ರದ್ದುಪಡಿಸುವ ಮೂಲಕ ದೇಶದ ಬಡ ಹಾಗೂ ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರವು ಮಹಾ ದ್ರೋಹ ಮಾಡಿದೆ ಎಂದರು.

ಡಾ.ಮನ್ಸೂರ್ ಪಾಷ ಶಂಷುದ್ದೀನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.