ADVERTISEMENT

ಡಿಸಿಸಿ ಬ್ಯಾಂಕ್‌ ವಿರುದ್ಧ ಕ್ರಮ: ಸಚಿವ ಎಚ್ಚರಿಕೆ

ಸಾಲ ಕೊಡುವಾಗ ಶೇ 20ರಷ್ಟು ಷೇರು ಕಡಿತಕ್ಕೆ ತೀವ್ರ ಸುಧಾಕರ್‌ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 1:44 IST
Last Updated 12 ಸೆಪ್ಟೆಂಬರ್ 2020, 1:44 IST
ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಚಿವ ಡಾ.ಕೆ.ಸುಧಾಕರ್ ಸಾಲದ ಚೆಕ್ ವಿತರಣೆ ಮಾಡಿದರು
ಚಿಕ್ಕಬಳ್ಳಾಪುರದಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಚಿವ ಡಾ.ಕೆ.ಸುಧಾಕರ್ ಸಾಲದ ಚೆಕ್ ವಿತರಣೆ ಮಾಡಿದರು   

ಚಿಕ್ಕಬಳ್ಳಾಪುರ: ಕೋಲಾರ- ಚಿಕ್ಕಬಳ್ಳಾಪುರ ಡಿಸಿಸಿ‌ ಬ್ಯಾಂಕ್‌ನಲ್ಲಿ‌ ಸಾಲ ಕೊಡುವ ಸಂದರ್ಭದಲ್ಲಿ ಶೇ 20ರಷ್ಟು ಷೇರು ಹಿಡಿದಿಟ್ಟುಕೊಳ್ಳುವ ಕ್ರಮವನ್ನು ಖಂಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೂಡಲೇ ಈ‌ ಪದ್ಧತಿ ಕೈಬಿಡದಿದ್ದರೆ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಹಾರೋಬಂಡೆ, ತಿಪ್ಪೇನಹಳ್ಳಿ, ಪೋಶೆಟ್ಟಿಹಳ್ಳಿ, ಗೊಲ್ಲಹಳ್ಳಿ, ಚಿಕ್ಕಬಳ್ಳಾಪುರ ನಗರ ಸೇರಿ ವಿವಿಧ ಗ್ರಾಮ ಪಂಚಾಯಿತಿಗಳ ಒಟ್ಟು 119 ಮಹಿಳಾ ಸ್ವ-ಸಹಾಯ ಸಂಘಗಳಿಗೆ ಶುಕ್ರವಾರ ಸುಮಾರು ₹6.1 ಕೋಟಿ ಮೊತ್ತದ ಸಾಲ ವಿತರಿಸಿ ಮಾತಾಡಿದರು.

‘ಡಿಸಿಸಿ ಬ್ಯಾಂಕ್ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಸಾಲ ಪಡೆದವರಲ್ಲಿ ಶೇ 20 ರಷ್ಟು ಶೇರು ಹಿಡಿದುಕೊಂಡರೆ ಫಲಾನುಭವಿಗಳಿಗೆ ಸಾಲದ ಲಾಭ ಹೇಗೆ ಸಿಗಲು ಸಾಧ್ಯ? ಈ ನಿಯಮವನ್ನು ಕೂಡಲೇ ಕೈ ಬಿಡಬೇಕು. ಇದು ನಿಮ್ಮ ಸ್ವಂತ ಬ್ಯಾಂಕ್ ಅಲ್ಲ. ಸರ್ಕಾರದ ಬ್ಯಾಂಕ್. ಸರ್ಕಾರ ರೂಪಿಸಿದ ನಿಯಮಗಳಂತೆ ನಡೆದುಕೊಳ್ಳಿ. ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದರು.

ADVERTISEMENT

‘ಈ ಡಿಸಿಸಿ ಬ್ಯಾಂಕ್‌ ಜನ ಸೇವೆಗಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾದ ನಡವಳಿಕೆ ಹೊಂದಿದೆ‌ ಎಂಬ ಆಪಾದನೆ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಜನಪರವಾದ ಸೇವೆ ನೀಡದೆ ಹೋದಲ್ಲಿ, ಬೇರೆಡೆ ಮಾಡಿದಂತೆ ಈ ಬ್ಯಾಂಕ್‌ ಅನ್ನು ಸೂಪರ್‌ಸೀಡ್ ಮಾಡಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬೇಡಿ’ ಎಂದು ಎಚ್ಚರಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ನಬಾರ್ಡ್‌ ಯೋಜನೆಯಡಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು‌ ಆದ್ಯತೆ‌ ನೀಡುತ್ತಿದೆ. ಮಹಿಳೆಯರು ಈ ದೇಶದ ಆಸ್ತಿ. ಇವರ ಸಬಲೀಕರಣವಾದರೇ ದೇಶವೇ ಅಭಿವೃದ್ಧಿಯಾದಂತೆ. ಮೊದಲೆಲ್ಲಾ ಬಡ್ಡಿಗೆ ಸಾಲ ಕೊಟ್ಟು, ನಂತರ ಬಡ್ಡಿ‌ ಮನ್ನಾ ಮಾಡಲಾಗುತ್ತಿತ್ತು. ಅದಕ್ಕಿಂತ ಕೊಡುವಾಗಲೇ ಬಡ್ಡಿರಹಿತವಾಗಿ‌ ನೀಡುವುದು ಸೂಕ್ತ ಎಂಬ ಕೇಂದ್ರ ಸರ್ಕಾರದ ನಿರ್ದೇಶನದಂತೆ ಇಂದು‌ ಮಹಿಳಾ ಸಂಘಟನೆಗಳಿಗೆ ಬಡ್ಡಿರಹಿತ ಸಾಲ ಕೊಡಲಾಗಿದೆ’ ಎಂದರು.

ಜಿಲ್ಲೆಯಲ್ಲಿ ಆರೋಗ್ಯ ಹಾಗೂ‌ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಮುದ್ದೇನಹಳ್ಳಿ ಸರ್ಕಾರಿ‌ ಶಾಲೆ ಮಾದರಿಯಂತೆ ಇತರೆ ಶಾಲೆಗಳ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ‌ ಕ್ರಮ ಕೈಗೊಳ್ಳಲಾಗಿದೆ. ಇನ್ನು, ಕೋವಿಡ್‌ ನಿಯಂತ್ರಣದಲ್ಲಿ ನಮ್ಮ ಜಿಲ್ಲೆ ಮಾದರಿಯಾಗಿದೆ ಎಂದರು.

ಇಲ್ಲಿ, ಕೈಗಾರಿಕಾ ವಲಯ ತೆರೆಯಲು ಈಗಾಗಲೇ ತೀರ್ಮಾನ ತೆಗೆದುಕೊಂಡಿದ್ದೇವೆ, ಕೊರೊನ‌ ಕಾರಣದಿಂದ ಒಂದು ವರ್ಷ ತಡವಾಗಿದೆ. ಮುಂದಿನ ವರ್ಷ ಸ್ಥಳ ಗುರುತಿಸುವ ಕೆಲಸವಾಗಲಿದೆ ಎಂದರು.

ಎತ್ತಿನಹೊಳೆ ಯೋಜನೆ ಶೀಘ್ರ: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ‌ ಎರಡೂವರೆ ವರ್ಷದೊಳಗೆ ಪೂರ್ಣಗೊಳಿಸಿ ಮೊದಲ ಪ್ರಾಶಸ್ತ್ಯದಲ್ಲಿ ಜಿಲ್ಲೆಗೆ ನೀರು ಹರಿಸುವಂತೆ ಮುಖ್ಯಮಂತ್ರಿ ಅವರಲ್ಲಿ‌ ಮನವಿ‌ ಮಾಡಿದ್ದೇನೆ ಎಂದು ವಿವರಿಸಿದರು.

***

‘ಷೇರು ಬಂಡವಾಳ ಸಂಗ್ರಹ ಅನಿವಾರ್ಯ’

ಚಿಕ್ಕಬಳ್ಳಾಪುರ: ‘ಡಿಸಿಸಿ ಬ್ಯಾಂಕ್ ಸ್ವಸಹಾಯ ಗುಂಪುಗಳಿಗೆ ಸಾಲ ನೀಡುವಾಗ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾನದಂಡವಾದ ‘ಬಂಡವಾಳ ಪರ್ಯಾಪ್ತತಾ ಅನುಪಾತ’ದ ಪ್ರಕಾರ ಷೇರು ಬಂಡವಾಳ ಸಂಗ್ರಹಿಸುವುದು ಅನಿವಾರ್ಯವಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಡಿಸಿಸಿ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು, ‘ಡಿಸಿಸಿ ಬ್ಯಾಂಕ್ ಸಾಲ ನೀಡುವ ಸಂದರ್ಭದಲ್ಲಿ ಶೇ 20ರಷ್ಟು ಷೇರು ಹಿಡಿದಿಟ್ಟುಕೊಳ್ಳುವ ಪದ್ಧತಿ ಕೈಬಿಡದಿದ್ದರೆ ಬ್ಯಾಂಕ್‌ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ಎಂದು ಹೇಳಿದ್ದರು.

ಸಚಿವರ ಈ ಹೇಳಿಕೆ ಕುರಿತು ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ, ‘ಸ್ವಸಹಾಯ ಗುಂಪುಗಳಿಗೆ ಡಿಸಿಸಿ ಬ್ಯಾಂಕ್ ಸಂಪೂರ್ಣ ಸಾಲ ನೀಡಬೇಕು ಎಂಬ ಸಚಿವರ ನಿಲುವು ಸರಿಯಾಗಿದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್‌ 2017–18ನೇ ಸಾಲಿನಲ್ಲಿ ರೂಪಿಸಿರುವ ಸಿಆರ್‌ಎಆರ್ ಅನ್ವಯ ಷೇರು ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಸಿಆರ್‌ಎಆರ್ ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾಗಿದೆ. ಇದನ್ನು ದೇಶ ವಿದೇಶಗಳಲ್ಲಿ ಅನೂಚಾನವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ವಿದೇಶಗಳಲ್ಲಿ ಸಿಆರ್‌ಎಆರ್‌ಗೆ ಬ್ಯಾಂಕಿನ ಮುಂಗಡ, ಹೂಡಿಕೆ ಇತ್ಯಾದಿಗಳ ಸುರಕ್ಷತೆಯ ಆಧಾರದ ಮೇಲೆ ಕನಿಷ್ಟ ಶೇ 8ರ ಮಾನದಂಡವನ್ನು ಪಾಲಿಸುತ್ತಿದ್ದರೆ, ಭಾರತದಲ್ಲಿ ಕನಿಷ್ಠ ಶೇ 9ರ ಅನುಪಾತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ’ ಎಂದರು.

‘ಈ ಹಿಂದೆ ಡಿಸಿಸಿ ಬ್ಯಾಂಕ್‌ನ ಸಿಆರ್‌ಎಆರ್‌ ಸ್ಥಿತಿ –3.5 ರಷ್ಟಿತ್ತು. ಜತೆಗೆ, ನಿವ್ವಳ ಸ್ಥಿತಿ ಋಣಾತ್ಮಕವಾಗಿತ್ತು. ಪರಿಣಾಮ, ಡಿಸಿಸಿ ಬ್ಯಾಂಕಿಗೆ ನಬಾರ್ಡ್ ಬ್ಯಾಂಕ್‌ನಿಂದ ಪುನರ್ ಧನ ಸೌಲಭ್ಯ ದೊರೆಯುತ್ತಿರಲಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.