ADVERTISEMENT

ಬಿಲ್ಲಾಂಡ್ಲಹಳ್ಳಿಯಲ್ಲಿ ಆದಿಬೈರವೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 12 ಮೇ 2025, 14:35 IST
Last Updated 12 ಮೇ 2025, 14:35 IST
ಚಿಂತಾಮಣಿಯ ಬಿಲ್ಲಾಂಡ್ಲಹಳ್ಳಿಯ ಆದಿಭೈರವೇಶ್ವರಸ್ವಾಮಿ ರಥೋತ್ಸವ ನಡೆಯಿತು
ಚಿಂತಾಮಣಿಯ ಬಿಲ್ಲಾಂಡ್ಲಹಳ್ಳಿಯ ಆದಿಭೈರವೇಶ್ವರಸ್ವಾಮಿ ರಥೋತ್ಸವ ನಡೆಯಿತು   

ಚಿಂತಾಮಣಿ: ತಾಲ್ಲೂಕಿನ ಕಡದಲಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಾಂಡ್ಲಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಆದಿಭೈರವೇಶ್ವರಸ್ವಾಮಿಯ ರಥೋತ್ಸವವು ಭಾನುವಾರ ಶ್ರದ್ಧಾ, ಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.

ರಥೋತ್ಸವದ ಪ್ರಯುಕ್ತ ದೇವಾಲಯದ ಒಳಗೆ ಮತ್ತು ಹೊರಗೆ ವಿವಿಧ ಹೂಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಅರ್ಚಕರಾದ ಶಂಕರಶಾಸ್ತ್ರಿ ಮತ್ತು ಶಿವಾನಂದಸ್ವಾಮಿ ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ರಥೋತ್ಸವದ ಸಲುವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಭಕ್ತರು ಬೆಳಗಿನಿಂದಲೇ ಸರತಿಯ ಸಾಲಿನಲ್ಲಿ ನಿಂತು ಹಣ್ಣು ಕಾಯಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಉತ್ಸವಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಂಗಳವಾದ್ಯಗಳೊಂದಿಗೆ ಕರೆತಂದು ಮೊದಲೇ ಅಲಂಕೃತವಾದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.  ರಥದಲ್ಲಿ ಮತ್ತೊಮ್ಮೆ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಟ್ರಸ್ಟ್ ಪದಾಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ನೂರಾರು ಭಕ್ತರು ಸಹ ಕೈಜೋಡಿಸಿ ರಥವನ್ನು ಎಳೆದು ಕೃತಾರ್ಥರಾದರು. ಭಕ್ತರು ಬಾಳೆಹಣ್ಣು, ಧವನ ಸಮರ್ಪಿಸಿದರು.

ರಥವನ್ನು ದೇವಾಲಯದ ಸುತ್ತಲೂ ಹಾಗೂ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಎಳೆದರು. ಭಕ್ತರ ಬಿಸಿಲ ದಗೆಯನ್ನು ತಣಿಸಲು ಪಾನಕ, ಮಜ್ಜಿಗೆ, ಕೋಸುಂಬರಿ ವಿತರಣೆ ನಡೆಯಿತು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ರಸ್ತೆಗಳಿಗೆ ಹಾಗೂ ಮನೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಥೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿತ್ತು. ಆದಿಬೈರವೇಶ್ವರಸ್ವಾಮಿಯ ಕುಲಭಾಂದವರು, ಭಕ್ತರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.