ADVERTISEMENT

ಆದಿಚುಂಚನಗಿರಿ ಮಠ: ‘ಒಕ್ಕಲಿಗರ ನೀಡುವ ಸಮುದಾಯವಾಗಿ ರೂ‍ಪಿಸಿದ ಮಠ’

ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಠದಲ್ಲಿ ಮೇಳೈಸಿದ ‘ಭಕ್ತ ಸಂಗಮ’

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 6:38 IST
Last Updated 23 ಫೆಬ್ರುವರಿ 2025, 6:38 IST
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದಲ್ಲಿ ನಡೆದ ‘ಭಕ್ತ ಸಂಗಮ’ ಕಾರ್ಯಕ್ರಮವನ್ನು ಎಚ್‌.ಡಿ.ದೇವೇಗೌಡ, ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಉದ್ಘಾಟಿಸಿದರು
ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದಲ್ಲಿ ನಡೆದ ‘ಭಕ್ತ ಸಂಗಮ’ ಕಾರ್ಯಕ್ರಮವನ್ನು ಎಚ್‌.ಡಿ.ದೇವೇಗೌಡ, ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರು ಉದ್ಘಾಟಿಸಿದರು   

ಚಿಕ್ಕಬಳ್ಳಾಪುರ: ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಸಂಭ್ರಮ, ಸಡಗರ, ಶ್ರದ್ಧೆ ಮತ್ತು ಭಕ್ತಿಯಿಂದ ‘ಭಕ್ತ ಸಂಗಮ’ ಕಾರ್ಯಕ್ರಮ ನಡೆಯಿತು. 

ಬಾಲಗಂಗಾಧರನಾಥ ಸ್ವಾಮೀಜಿ ಅವರ 80ನೇ ಜಯಂತಿ, ನಿರ್ಮಲಾನಂದನಾಥ ಸ್ವಾಮೀಜಿ ಅವರ 12ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ, ರಜತ ತುಲಾಭಾರ, ವೀರಾಂಜನೇಯ ಸ್ವಾಮಿ ದೇವಾಲಯದ 12ನೇ ವಾರ್ಷಿಕೋತ್ಸವ ಮತ್ತು ಕುಂಭಾಭಿಷೇಕ, ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಠದ 27ನೇ ವಾರ್ಷಿಕೋತ್ಸವ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ 50ನೇ ವರ್ಷದ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಭಕ್ತಸಂಗಮ’ವು ನಡೆಯಿತು.

‘ಒಕ್ಕಲಿಗ ಸಮಾಜವನ್ನು ಸ್ವಾಭಿಮಾನಿ ಸಮಾಜವಾಗಿ ಕಟ್ಟುವುದಷ್ಟೇ ಅಲ್ಲ. ಈ ಸಮುದಾಯ ಬೇಡುವ ಸಮುದಾಯವಲ್ಲ, ನೀಡುವ ಸಮುದಾಯ ಎನ್ನುವ ನಿಟ್ಟಿನಲ್ಲಿ ಸಮಾಜವರನ್ನು ಮಠವು ರೂಪಿಸಿದೆ. ಶೋಷಿತ ಸಮುದಾಯಗಳ ಜಾಗೃತಿಯಲ್ಲಿ ತೊಡಗಿದೆ’ ಎಂದು ಗಣ್ಯರು ಪ್ರಶಂಸಿಸಿದರು. 

ADVERTISEMENT

ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ‘ಬಾಲಗಂಗಾಧರನಾಥ ಸ್ವಾಮೀಜಿ ಒಕ್ಕಲಿಗ ಸಮಾಜಕ್ಕೆ ಮಾತ್ರವಲ್ಲ‌ ತುಳಿತಕ್ಕೆ ಒಳಗಾದ ಸಮಾಜದವರನ್ನು ಗುರುತಿಸಿ ಶಕ್ತಿ ಕೊಟ್ಟರು. ಅವರನ್ನು ಮೇಲೆತ್ತಲು ಪ್ರಯತ್ನಿಸಿದರು ಎಂದರು.

ಮಠದ ಅಭಿವೃದ್ಧಿ ಮತ್ತು ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಪಟ್ಟ ಕಟ್ಟಿದ್ದು ಬಾಲಗಂಗಾಧರನಾಥ ಸ್ವಾಮೀಜಿ ಅವರ ಅದ್ಬುತವಾದ ಕೆಲಸಗಳು. ಸಮಾಜದ ವ್ಯವಸ್ಥೆ ಮತ್ತು ಏರುಪೇರುಗಳನ್ನು ಸರಿದೂಗಿಸುವುದಕ್ಕೆ ತಮ್ಮ ಇಡೀ ಜೀವನ ಮುಡುಪಿಟ್ಟು ಹೋರಾಡಿದ ಚೇತನ ಎಂದರು.

ಸಂಸತ್ತಿಗೆ ಹೋಗಲು ನನಗೆ ಶಕ್ತಿ ಕೊಡು ಎಂದು ಈಶ್ವರನಲ್ಲಿ ಪ್ರಾರ್ಥಿಸುವೆ. ಇಲ್ಲಿ ಪಕ್ಷಬೇಧ ಮರೆತು ಎಲ್ಲ ಶಾಸಕರು ಪಾಲ್ಗೊಂಡಿದ್ದಾರೆ. ಇದು ಸಂತೋಷದ ವಿಷಯ ಎಂದರು. 

ತಮ್ಮ ಮತ್ತು ಚಿಕ್ಕಬಳ್ಳಾಪುರದ ನಂಟು ಪ್ರಸ್ತಾಪಿಸಿದ ದೇವೇಗೌಡರು, 1962ರಲ್ಲಿ ನಾನು ಹನುಮಪ್ಪ ಅವರ ಬಳಿ ಬಿತ್ತನೆ ಆಲೂಗಡ್ಡೆ ತೆಗೆದುಕೊಂಡು ಹೋಗಲು ಮಂಚನಬಲೆಗೆ ಬಂದಿದ್ದೆ. ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ 32 ಮೂಟೆ ಇಳುವರಿ ಬಂದಿತ್ತು. ಆಗ ಒಂದು ಮೂಟೆಯ ಬೆಲೆ ಮೂರು ರೂಪಾಯಿ ಎರಡು ಆಣೆ ಎಂದು ನೆನಪಿಸಿಕೊಂಡರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಪಂಚಗಿರಿಗಳನ್ನು ಹೊಂದಿರುವ ದಿವ್ಯ ಅಧ್ಯಾತ್ಮ ಕ್ಷೇತ್ರ ಚಿಕ್ಕಬಳ್ಳಾಪುರ. ಕೈವಾರ ತಾತಯ್ಯ, ವೀರಬ್ರಹ್ಮೇಂದ್ರ ಸ್ವಾಮಿ ಅವರು ಜನಿಸಿದ ನಡೆದಾಡಿದ ಸ್ಥಳ ಇದು. ಇಂತಹ ಕಡೆ ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಠ ಸ್ಥಾಪಿಸಿದರು ಎಂದು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಠದ ಶಾಲೆಗಳಲ್ಲಿ 30 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.  ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುತ್ತಿದ್ದರು. ಎರಡೂ ಜಿಲ್ಲೆಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆಎ ನೀರಿನ ಬೆಲೆ ಗೊತ್ತು. ನಾಡಿನ ಬೇರೆ ಬೇರೆ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಎರಡೂ ಜಿಲ್ಲೆಯ ರೈತರು ದೊರೆಯುವ ನೀರಿನಲ್ಲಿಯೇ ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ದೇವೇಗೌಡರಿಗೆ ಈ ವರ್ಷದ ಮೇಗೆ 93 ವರ್ಷ. ಆದರೂ ಅವರಲ್ಲಿನ ಶ್ರದ್ಧೆ, ಗುರುಸ್ಥಾನಕ್ಕೆ ನೀಡುವ ಗೌರವ, ಜ್ಞಾನಶಕ್ತಿ ಅವರನ್ನು ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತವನ್ನಾಗಿ ಮಾಡಿದೆ ಎಂದರು.

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಆದಿಚುಂಚನಗಿರಿ ಮಠ ಎಲ್ಲ ವರ್ಗದವರಿಗೆ ಶಿಕ್ಷಣ ನೀಡುತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ ಅವರು ಭವ್ಯವಾಗಿ ನಿರ್ಮಿಸಿದ ಮಠ ಮತ್ತು ಪರಂಪರೆಯನ್ನು ನಿರ್ಮಲಾನಂದನಾಥ ಸ್ವಾಮೀಜಿ ಮತ್ತಷ್ಟು ಉತ್ತಮವಾಗಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಕೆ.ವೈ.ನಂಜೇಗೌಡ, ನಮ್ಮ ಮಠ ಒಂದು‌ ಸಮಾಜಕ್ಕೆ ಸೀಮಿವಾಗಿಲ್ಲ. ಎಲ್ಲ ಜಾತಿ ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಒಕ್ಕಲಿಗ ಸಮಾಜಕ್ಕೆ ಇದೆ ಎಂದರು.

ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಮಠದ ಮಂಗಳನಾಥ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಪುರುಷೋತ್ತಮಾನಂದ ಸ್ವಾಮೀಜಿ, ಶಂಭುನಾಥಸ್ವಾಮೀಜಿ,  ಪ್ರಸನ್ನನಾಥ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಸೋಮನಾಥ ಸ್ವಾಮೀಜಿ, ಧರ್ಮಪಾಲನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಚಂದ್ರಶೇಖರ ನಾಥ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ, ಶಿವಪುತ್ರನಾಥ ಸ್ವಾಮೀಜಿ, ಕೈಲಾಸನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ನಾಯಕರು, ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು.

‘ಭಕ್ತ ಸಂಗಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು

ಆಶೀರ್ವಾದ ಇರುವವರೆಗೂ ಶಕ್ತಿ‌

ಕೆಲವರು ದೇವೇಗೌಡರದ್ದು ಇನ್ನೇನು ಮುಗಿದೇ ಹೋಯಿತು ಎನ್ನುತ್ತಾರೆ. ಗುರುಗಳು ಮತ್ತು ಜನರ ಆಶೀರ್ವಾದ ನನ್ನ ಮೇಲಿದೆ. ಈ ಶರೀರದಲ್ಲಿ ಕೊನೆಯ ಉಸಿರು ಇರುವವವರೆಗೂ ಎಷ್ಟು ಶಕ್ತಿ ಇರುವವರೆಗೂ ಹೋರಾಟ ಮಾಡುವೆ. ರಾಜ್ಯದ ಜನರಿಗೆ ಒಳಿತು ಮಾಡಬೇಕು. ಆ ಕಾರಣದಿಂದ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವ ನನ್ನದಲ್ಲ ಎಂದು ಎಚ್‌.ಡಿ.ದೇವೇಗೌಡ ಹೇಳಿದರು. 

ಸಾಮಾಜಿಕ ನ್ಯಾಯ ಎತ್ತಿಹಿಡಿದ ಮಠ

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ಶೋಷಿತ ಸಮುದಾಯಗಳು ಆದಿಚುಂಚನಗಿರಿ ಮಠದ ಸೌಲಭ್ಯ ಪಡೆಯಬೇಕು. ಆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿ ಸಮಾಜ ಕಟ್ಟಬೇಕು ಎಂದರು. ಸ್ವಾರ್ಥ ಭಾವನೆ ಹೆಚ್ಚುತ್ತಿದೆ. ನನ್ನ ಸಮಾಜ ಮಠ ಮಠಾಧೀಶರು ಬೆಳೆಯಬೇಕು ಎಂದು ತೇಲುತ್ತಿದ್ದೇವೆ. ಇಂತಹ ಸಮಯದಲ್ಲಿ ನಮ್ಮ ಮಠ ಬೆಳೆದರಷ್ಟೇ ಸಾಲದು ಸಮಾಜದ ಕಟ್ಟಕಡೆಯ ಸಮುದಾಯಗಳ ಪೀಠಗಳು ಮಠಗಳು ಬೆಳೆಯಬೇಕು.  ಆ ಮೂಲಕ ಆ ಸಮುದಾಯಗಳು ಜಾಗೃತರಾಗಬೇಕು ಎನ್ನುವ ಆಶಯದಲ್ಲಿ ಆದಿಚುಂಚನಗಿರಿ ಮಠವು ಹೊಂದಿದೆ. ಮಠವು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುತ್ತಿದೆ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.