ADVERTISEMENT

ಮಣ್ಣಿನ ಆರೋಗ್ಯ ರಕ್ಷಣೆಗೆ ಸಲಹೆ: ಡೀನ್ ಡಾ.ಪಿ. ವೆಂಕಟರವಣ

ಸಮಗ್ರ ಪೀಡೆ ನಿರ್ವಹಣಾ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 4:38 IST
Last Updated 9 ಫೆಬ್ರುವರಿ 2022, 4:38 IST
ಚಿಂತಾಮಣಿ ತಾಲ್ಲೂಕಿನ ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡೀನ್ ಡಾ.ಪಿ. ವೆಂಕಟರವಣ ಉದ್ಘಾಟಿಸಿದರು. ವಿಜ್ಞಾನಿಗಳಾದ ಡಾ.ಕಾರ್ತಿಕ್, ಡಾ.ವಿವೇಕ ಉಪ್ಪಾರ, ಡಾ.ಮಂಜುನಾಥ್, ಡಾ.ನರಸಾರೆಡ್ಡಿ, ಡಾ.ಧನಂಜಯ ಇದ್ದರು
ಚಿಂತಾಮಣಿ ತಾಲ್ಲೂಕಿನ ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡೀನ್ ಡಾ.ಪಿ. ವೆಂಕಟರವಣ ಉದ್ಘಾಟಿಸಿದರು. ವಿಜ್ಞಾನಿಗಳಾದ ಡಾ.ಕಾರ್ತಿಕ್, ಡಾ.ವಿವೇಕ ಉಪ್ಪಾರ, ಡಾ.ಮಂಜುನಾಥ್, ಡಾ.ನರಸಾರೆಡ್ಡಿ, ಡಾ.ಧನಂಜಯ ಇದ್ದರು   

ಚಿಂತಾಮಣಿ: ‘ಮಣ್ಣು ಮನುಷ್ಯರ ಕಣ್ಣುಗಳಿದ್ದಂತೆ. ಅಂತಹ ಮಣ್ಣಿಗೆ ರೈತರು ಹೆಚ್ಚಾಗಿ ಕ್ರಿಮಿನಾಶಕ ಹಾಗೂ ಕಳೆನಾಶಕ ಸಿಂಪಡಣೆ ಮಾಡುತ್ತಿರುವುದರಿಂದ ಅದರ ಆರೋಗ್ಯ ಕೆಟ್ಟು ಸಮಸ್ಯಾತ್ಮಕ ಮಣ್ಣಾಗಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ’ ಎಂದು ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ. ವೆಂಕಟರವಣ ತಿಳಿಸಿದರು.

ತಾಲ್ಲೂಕಿನ ಕುರುಬೂರು ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತ ಕಲ್ಯಾಣ ವಿಭಾಗ, ವನಸ್ಪತಿ ಸಂರಕ್ಷಣೆ ಸಂಘರೋಧ ಮತ್ತು ಸಂಗ್ರಹಣ ನಿರ್ದೇಶನಾಲಯ, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣಾ ಕೇಂದ್ರದಿಂದ ಮಂಗಳವಾರ ಕೃಷಿ ಪರಿಕರ ಮಾರಾಟಗಾರರು ಹಾಗೂ ಕೀಟನಾಶಕ ವಿತರಕರಿಗೆ ಹಮ್ಮಿಕೊಂಡಿದ್ದ ಎರಡು ದಿವಸಗಳ ಸಮಗ್ರ ಪೀಡೆ ನಿರ್ವಹಣಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ಕೀಟನಾಶಕ ಹಾಗೂ ಪೀಡೆನಾಶಕಗಳನ್ನು ಇತಿಮಿತಿ ಇಲ್ಲದೆ ಬಳಕೆ ಮಾಡುತ್ತಿರುವುದು ಆತಂಕಕಾರಿ. ಇದೇ ರೀತಿ ಬಳಕೆ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಮಣ್ಣು ಸಂಪೂರ್ಣ ನಿರುಪಯುಕ್ತವಾಗುತ್ತದೆ. ಬೆಳೆ ಬೆಳೆಯಲು ಅನರ್ಹವಾಗುತ್ತದೆ. ಈಗಲೇ ಎಚ್ಚೆತ್ತುಕೊಂಡು ಕಡಿಮೆ ಪ್ರಮಾಣದಲ್ಲಿ ಕ್ರಿಮಿನಾಶಕಗಳನ್ನು ಉಪಯೋಗಿಸಬೇಕು ಎಂದರು.

ADVERTISEMENT

ಭಾರತ ಕ್ರಿಮಿನಾಶಕಗಳ ಸಿಂಪಡಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಿಂದ ಮನುಷ್ಯರ ಆರೋಗ್ಯಕ್ಕೆ ಕಂಟಕವಾಗಿದೆ. ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರ ಉಪಯೋಗಿಸಿ ಬೆಳೆದ ಉತ್ಪನ್ನಗಳ ಸೇವನೆಯಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ಎಲ್ಲೆಡೆ ಕಾಣಬಹುದು. ಮಣ್ಣಿನ ಫಲವತ್ತತೆ ಹಾಗೂ ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ರೈತರು ಕ್ರಿಮಿನಾಶಕ ಸಿಂಪಡಣೆ ಮಾಡುವ ಸಮಯದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ರೈತರು ಆತ್ಮಾವಲೋಕನ ಮಾಡಿಕೊಂಡು ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳ ಸಲಹೆಯಂತೆ ಕನಿಷ್ಠ ಮಟ್ಟದಲ್ಲಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ಡಾ.ಅತಿಶಿ ಪಾಂಡೆ ಮಾತನಾಡಿ, ಕೀಟನಾಶಕಗಳ ಸುರಕ್ಷಿತ ಬಳಕೆ, ವಿವಿಧ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಡಾ.ಕಾರ್ತಿಕ್, ಡಾ.ವಿವೇಕ ಉಪ್ಪಾರ, ಡಾ.ಮಂಜುನಾಥ್, ಡಾ.ನರಸಾರೆಡ್ಡಿ. ಡಾ.ಧನಂಜಯ, ಕೃಷಿ ಪರಿಕರಗಳ ಮಾರಾಟಗಾರರು ಹಾಗೂ ವಿತರಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.