ADVERTISEMENT

ಅಗಲಗುರ್ಕಿ ಮೇಲ್ಸೇತುವೆ; ₹152 ಕೋಟಿ ಮಂಜೂರು

ದಿಶಾ ಸಮಿತಿ ಸಭೆಯಲ್ಲಿ ಸಂಸದ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 7:49 IST
Last Updated 18 ನವೆಂಬರ್ 2025, 7:49 IST
ಚಿಕ್ಕಬಳ್ಳಾಪುರದಲ್ಲಿ ನಡೆದ ದಿಶಾ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು
ಚಿಕ್ಕಬಳ್ಳಾಪುರದಲ್ಲಿ ನಡೆದ ದಿಶಾ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು   

ಚಿಕ್ಕಬಳ್ಳಾಪುರ: ನಗರದ ಹೊರವಲಯದ ಅಗಲಗುರ್ಕಿ ಬಳಿಯ ಬಿ.ಬಿ ರಸ್ತೆ ಮತ್ತು ರೈಲ್ವೆ ಮಾರ್ಗ ಸಂಪರ್ಕಿಸುವ ಸ್ಥಳದಲ್ಲಿ ₹152 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ದಿಶಾ ಸಭೆಯಲ್ಲಿ ಅವರು ಮಾತನಾಡಿದರು.

ಬಿ.ಬಿ ರಸ್ತೆ ಮತ್ತು ಬಿಜಿಎಸ್ ಶಾಲೆ ಸಂಪರ್ಕಿಸುವ ಕಡೆ ₹37 ಕೋಟಿ ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸಹ ಕೈಗೆತ್ತಿಕೊಳ್ಳಲಾಗುವುದು. ಚದಲಪುರ ಬಳಿ ₹55 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಡಿಸೆಂಬರ್ ಮತ್ತು ಜನವರಿ ವೇಳೆಗೆ ಪೂರ್ಣಗೊಳಿಸಿ ಜನರ ಸೇವೆಗೆ ಮುಕ್ತಗೊಳಿಸಬೇಕು ಎಂದು ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಯೋಜನಾ ಅಭಿಯಂತರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಜನವರಿ ವೇಳೆಗೆ ಈ ಮೇಲ್ಸೇತುವೆ ಲೋಕಾರ್ಪಣೆ ಆಗಲಿದೆ ಎಂದು ಭರವಸೆ ನೀಡಿದರು.

ADVERTISEMENT

ಜಲಜೀವನ್ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ‘ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಗೆ ₹952 ಕೋಟಿ ನೀಡಲಾಗಿದೆ. ಪ್ರತಿ ಮನೆಗೆ ನಳ ಸಂಪರ್ಕ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದು ಜನಸಾಮಾನ್ಯರಿಗೆ ಬಹಳ ಉಪಯೋಗ ಆಗಲಿದೆ. ಕಾಮಗಾರಿಗಳು ಈಗಾಗಲೇ ಪೂರ್ಣವಾಗಿರುವ ಪಟ್ಟಿ ನೀಡಿ. ನಾನು ಮತ್ತು ಸಿಇಒ ಅವರು ಸ್ಥಳಕ್ಕೆ ಭೇಟಿ ನೀಡುತ್ತೇವೆ’ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲೆಯಲ್ಲಿ ಬಹುತೇಕವಾಗಿ ಸಮರ್ಪಕ ಅನುಷ್ಠಾನ ಆಗುತ್ತಿವೆ. ಕೇಂದ್ರ ಪುರಸ್ಕೃತ ಕೆಲವು ಯೋಜನೆಗಳಡಿ ವಿವಿಧ ಸವಲತ್ತು, ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಕೆಲವು ಬ್ಯಾಂಕುಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಭೆ ಮಾಡಿ ಬ್ಯಾಂಕ್ ಆಡಳಿತ ವರ್ಗದವರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ಕೇಂದ್ರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಯೋಜನೆಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದವು.

ಜಿಲ್ಲಾಧಿಕಾರಿ ಪಿ.ಎನ್ ರವೀದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ವೈ.ನವೀನ್ ಭಟ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್.ಎಸ್ ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗನ್ನಾಥ್ ರೈ, ದಿಶಾ ಸಮಿತಿ ಸದಸ್ಯರಾದ ಎಚ್.ಎನ್ ಶಿವಕುಮಾರ್, ಎನ್.ಮಮತಾ, ಟಿ.ವೆಂಕಟರಮಣ, ಕೆ.ನಾಗಭೂಷಣ ರಾವ್, ಕೆ.ಎಸ್ ಕೃಷ್ಣಾರೆಡ್ಡಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

‘ಇ ಖಾತೆ; ಅಸಮಾಧಾನ’

ಬಾಗೇಪಲ್ಲಿಯಲ್ಲಿ ಅಂಚೆ ಕಚೇರಿಯು ಕಟ್ಟಡ ನಿರ್ಮಿಸಲು ಮುಂದಾಗಿದೆ. ಆದರೆ ಇಚಖಾತೆ ಮಾಡಿಕೊಡುತ್ತಿಲ್ಲ ಎಂದು ಅಂಚೆ ಇಲಾಖೆ ಅಧಿಕಾರಿ ಸಂಸದರ ಗಮನಕ್ಕೆ ತಂದರು.  ಆಗ ಸಂಸದರು ಬಾಗೇಪಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಒಂದು ದಿನದಲ್ಲಿ ಇ–ಖಾತೆ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.  ಜಿಲ್ಲೆಯಲ್ಲಿ ಇ–ಖಾತೆ ವಿಚಾರದಲ್ಲಿ ಅಧ್ವಾನಗಳು ಆಗುತ್ತಿವೆ. ಜನರನ್ನು ಅಲೆದಾಡಿಸಲಾಗುತ್ತಿದೆ. ಹಣ ಸಹ ಪಡೆಯುತ್ತಿದ್ದಾರೆ ಎನ್ನುವ ದೂರುಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಿಬ್ಬಂದಿ ಉಪಕರಣವಿಲ್ಲ’

ಚಿಕ್ಕಬಳ್ಳಾಪುರ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭದ ಕುರಿತು ಮಾತನಾಡಿದ ಸಂಸ್ಥೆ ನಿರ್ದೇಶಕ ‘ಕಟ್ಟಡ ಪೂರ್ಣವಾಗಿದೆ. ಆದರೆ ಅಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಮಾನವ ಸಂಪನ್ಮೂಲ (ಸಿಬ್ಬಂದಿ) ಮತ್ತು ಉಪಕರಣಗಳು ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.