
ನಾಗಾರ್ಜುನ ಕಾಲೇಜಿನಲ್ಲಿ ಎಐ ಇಂಫಾಕ್ಟ್ ಸಮ್ಮಿಟ್ ನಡೆಯಿತು
ಚಿಕ್ಕಬಳ್ಳಾಪುರ: ಪ್ರಸ್ತುತ ಕೃತಕ ಬುದ್ಧಿಮತ್ತೆ (ಎಐ) ಮಾನವ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿದರೆ ಪ್ರಗತಿ ಸಾಧ್ಯ. ತಂತ್ರಜ್ಞಾನದ ಯುಗದಲ್ಲಿ ನಾವು ಬದಲಾಗಬೇಕು ಎಂದು ಮಿಯಾಮಿ ಫ್ಲೋರಿಡಾ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಪ್ರಾಧ್ಯಾಪಕ ಡಾ.ಎಸ್.ಎಸ್.ಅಯ್ಯಂಗಾರ್ ಹೇಳಿದರು.
ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯಾ ಎಐ ಇಂಫಾಕ್ಟ್ ಸಮ್ಮಿಟ್‌ನ 2026ರ ಪೂರ್ವಭಾವಿಯಾಗಿ ನಾಗಾರ್ಜುನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಐ ಇಂಫಾಕ್ಟ್ ಸಮ್ಮಿಟ್‌ನಲ್ಲಿ ಮಾತನಾಡಿದರು.
ಪ್ರಸ್ತುತ ಎಲ್ಲ ನಿರ್ಧಾರಗಳನ್ನು ಎಐಗೆ ಬಿಟ್ಟರೆ, ಅದು ತನ್ನ ಅನುಗುಣವಾಗಿ ಉತ್ತರ ನೀಡುತ್ತದೆ. ಅದು ಯಾವಾಗಲೂ ಸರಿಯಾಗಿರುತ್ತದೆ ಎನ್ನಲು ಸಾಧ್ಯವಿಲ್ಲ. ಇದನ್ನು ತಪ್ಪಾಗಿ ಬಳಸಿದರೆ ಪರಿಣಾಮವೂ ಹಾಗೆಯೇ ಬರುತ್ತದೆ ಎಂದು ಎಚ್ಚರಿಸಿದರು.
ಎಐ ಮಾನವ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಪರಿವರ್ತನೆ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಸಂಭವಿಸಲಿದೆ. ಅದಕ್ಕೆ ತಕ್ಕಂತೆ ನಾವು ನಿರಂತರವಾಗಿ ಬದಲಾಯಿಸಿಕೊಳ್ಳಲು ಸಿದ್ಧರಾಗಿರಬೇಕು ಎಂದರು.
ಎಐ ಯುಗದಲ್ಲಿ ಶಿಕ್ಷಕರ ಪಾತ್ರವೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ವಿದ್ಯಾರ್ಥಿಗಳಿಗೆ ಆಳವಾದ ಜ್ಞಾನ ಮತ್ತು ಮೌಲ್ಯಗಳನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಸೈಬರ್ ಅಪರಾಧ ಇಂದಿನ ಪ್ರಮುಖ ಸಮಸ್ಯೆಯಾಗಿದೆ. ಹ್ಯಾಕರ್‌ಗಳು ದಿನೇದಿನೇ ಹೆಚ್ಚು ಚುರುಕಾಗುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಮೂಲಕ ಸೈಬರ್ ಅಪರಾಧ, ಹ್ಯಾಕಿಂಗ್‌ಗೆ ದಿಟ್ಟ ಉತ್ತರ ಹಾಗೂ ಅವುಗಳ ಕೌಶಲ ಕಲಿಸಬೇಕು. ಸೈಬರ್ ಹ್ಯಾಕರ್‌ಗಳಿಗೆ ತಕ್ಕ ಉತ್ತರ ನೀಡುವಂತೆ ಯುವಜನತೆಯನ್ನು ತಯಾರಿಸಬೇಕು ಎಂದರು.
ಎಐಸಿಟಿಇ ನಿರ್ದೇಶಕ ಡಾ.ಎನ್.ಎಚ್.ಸಿದ್ದಲಿಂಗಸ್ವಾಮಿ ಮಾತನಾಡಿ, ಯಾವುದೇ ತಂತ್ರಜ್ಞಾನ ಮಾನವನಿಂದಲೇ ಸೃಷ್ಟಿಯಾಗುತ್ತದೆ. ಅದು ಮಾನವನಿಗಿಂತ ಮುಂದೆ ಹೋಗಲು ಸಾಧ್ಯವಿಲ್ಲ. ತಂತ್ರಜ್ಞಾನ ಯುಗದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಐ ಬಂದ ನಂತರ ಉದ್ಯೋಗಾವಕಾಶ ಕಡಿಮೆಯಾಗುತ್ತವೆ ಎಂಬ ಮಾತು ಸತ್ಯಕ್ಕೆ ದೂರ. ತಮ್ಮ ಸಾಮರ್ಥ್ಯ ಬೆಳೆಸಿಕೊಂಡು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಉದ್ಯೋಗವೇ ನಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಕಾಲೇಜಿನ ಸಿಇಒ ಭಾನು ಚೈತನ್ಯ, ನಿರ್ದೇಶಕ ಗೋಪಾಲ ಕೃಷ್ಣ, ಪ್ರಾಂಶುಪಾಲ ಡಾ.ಜಿ.ತಿಪ್ಪೇಸ್ವಾಮಿ, ಪ್ರಾದೇಶಿಕ ಎಐ ಪೂರ್ವ ಸಮಿಟ್‌ನ ಪ್ರಧಾನ ಸಂಯೋಜಕ ಡಾ.ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.