ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಚಿಕ್ಕಬಳ್ಳಾಪುರವು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಸ್ಥಳ.
ಪ್ರತಿ ಸರ್ಕಾರಗಳು ಸಹ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನದ ಮಾತನಾಡುತ್ತವೆ. ವಿಶೇಷವಾಗಿ ನಂದಿಗಿರಿಧಾಮವನ್ನು ಕೇಂದ್ರವಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತವೆ. ಅದಕ್ಕೆ ನಿದರ್ಶನ ರೋಪ್ ವೇ.
ಈಗ ಮತ್ತೊಂದು ಮಹತ್ವದ ಹೆಜ್ಜೆ ಎನ್ನುವಂತೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ನಂದಿಬೆಟ್ಟಕ್ಕೆ ಪ್ರವಾಸಿ ಸರ್ಕಿಟ್ ರೂಪಿಸಲು ಸರ್ಕಾರ ಚಿಂತಿಸಿದೆ. ಈ ವಿಚಾರವು ಸರ್ಕಾರ ರೂಪಿಸುತ್ತಿರುವ ನೂತನ ಪ್ರವಾಸೋದ್ಯಮ ನೀತಿಯಲ್ಲಿ ಅಡಕವಾಗಿದೆ ಎನ್ನುತ್ತವೆ ಪ್ರವಾಸೋದ್ಯಮ ಇಲಾಖೆ ಮೂಲಗಳು.
ಈ ಪ್ರವಾಸಿ ಸರ್ಕಿಟ್‌ನಿಂದ ನಂದಿಗಿರಿಧಾಮವಷ್ಟೇ ಅಲ್ಲ ಚಿಕ್ಕಬಳ್ಳಾಪುರಕ್ಕೆ ಹೊಂದಿಕೊಂಡಿರುವ ಪ್ರವಾಸಿ ತಾಣಗಳು ಅಭಿವೃದ್ಧಿಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಏನಿದು ಸರ್ಕಿಟ್: ವಿಮಾನ ನಿಲ್ದಾಣದಿಂದ ವಿವಿಧ ಕಡೆಗಳಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎಂಟು ಮತ್ತು ನಾಲ್ಕು ಗಂಟೆಗಳ ಈ ಪ್ರವಾಸಿ ಸರ್ಕಿಟ್ ಯೋಜನೆ ರೂಪಿಸಲಾಗುತ್ತಿದೆ.
ವಿಮಾನ ನಿಲ್ದಾಣದಿಂದ ಪ್ರವಾಸಿಗರ ವಿಮಾನವು ಹೊರಡಲು ತುಂಬಾ ಸಮಯವಿದೆ. ಅಥವಾ ವ್ಯಕ್ತಿಯೊಬ್ಬರ ಕೆಲಸ ಕಾರ್ಯಗಳು ಬೆಳಿಗ್ಗೆ 10ಕ್ಕೆ ಮುಗಿದಿದೆ. ಅವರ ವಿಮಾನವು ಸಂಜೆ 5ಕ್ಕೆ ಹೊರಡಲಿದೆ. ಅಷ್ಟು ದೀರ್ಘ ಸಮಯ ಅವರಿಗೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ದರ್ಶನ ಮಾಡಿಸಬೇಕು. ಈ ದೃಷ್ಟಿ ಇಟ್ಟುಕೊಂಡೇ ಪ್ರವಾಸಿ ಸರ್ಕಿಟ್ ರೂಪಿಸಲಾಗುತ್ತಿದೆ.
ನಾಲ್ಕು ಗಂಟೆ ಪ್ರವಾಸಿ ಸರ್ಕಿಟ್ ಮೊದಲಿಗೆ ದೇವನಹಳ್ಳಿಯ ಟಿಪ್ಪು ಜನಿಸಿದ ಕೋಟೆ, ಸ್ಥಳದಿಂದ ಆರಂಭವಾಗಲಿದೆ. ಅಲ್ಲಿಂದ ನಂದಿ ಗಿರಿಧಾಮ, ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ಕಣಿವೆ ಬಸವಣ್ಣ ಮತ್ತು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ ವೀಕ್ಷಿಸಬಹುದು. ಈ ಎಲ್ಲ ಸ್ಥಳಗಳಲ್ಲಿ ವೀಕ್ಷಿಸಿ ವಾಪಸ್ ವಿಮಾನ ನಿಲ್ದಾಣ ತಲುಪಲು ನಾಲ್ಕು ತಾಸುಗಳ ಕಾಲಮಿತಿ ಇರುತ್ತದೆ.
ಎಂಟು ಗಂಟೆಯ ಪ್ರವಾಸಿ ಸರ್ಕಿಟ್‌ನಲ್ಲಿ ಈ ಮೇಲಿನ ಸ್ಥಳಗಳ ಜೊತೆಗೆ ರಂಗಸ್ಥಳ, ಈಶ ಯೋಗ ಕೇಂದ್ರವೂ ಸೇರಲಿದೆ. ಈ ಪ್ರವಾಸಿ ಸರ್ಕಿಟ್ ಯೋಜನೆಯ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಹಂತದಲ್ಲಿ ಚರ್ಚೆಗಳು ನಡೆದಿವೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಈ ‘ಹೊಸ ಸರ್ಕಿಟ್’ ಅನುಷ್ಠಾನವಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತವೆ ಇಲಾಖೆ ಮೂಲಗಳು.
ಟ್ಯಾಕ್ಸಿಗಳ ಮೂಲಕ ಪ್ರವಾಸಿಗರನ್ನು ಈ ತಾಣಗಳಿಗೆ ಕರೆ ತರಲಾಗುತ್ತದೆ. ಇದಕ್ಕೆ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲು ಸಹ ಚಿಂತಿಸಲಾಗುತ್ತಿದೆ. ಈಗಾಗಲೇ ಬೆಂಗಳೂರಿನಿಂದ ₹ 500 ದರದಲ್ಲಿ ಪ್ರವಾಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿಯ ಈ ಯೋಜನೆಗೆ ಉತ್ತಮ ಸ್ಪಂದನೆ ಸಹ ದೊರೆತಿದೆ. ಅದೇ ಮಾದರಿಯಲ್ಲಿ ‘ವಿಮಾನ ನಿಲ್ದಾಣದಿಂದ ನಂದಿಗಿರಿಧಾಮಕ್ಕೆ ಪ್ರವಾಸಿ ಸರ್ಕಿಟ್’ ರೂಪಿಸುವ ಯೋಜನೆ ಇದಾಗಿದೆ.
ಸರ್ಕಿಟ್‌ಗಾಗಿಯೇ ವೇಗ: ನಂದಿಗಿರಿಧಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಆಗಾಗ್ಗೆ ‘ನಂದಿಗಿರಿಧಾಮ ಅಭಿವೃದ್ಧಿ ಸಮಿತಿ’ ಸಭೆಗಳನ್ನು ನಡೆಸುತ್ತಿದೆ. ಈಗಾಗಲೇ ಗಿರಿಧಾಮದಲ್ಲಿನ ಟಿಪ್ಪು ಬೇಸಿಗೆ ಅರಮನೆ ಅಂದಗೊಳಿಸಲಾಗಿದೆ. ಹೀಗೆ ನಾನಾ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ನಂದಿ ಅಭಿವೃದ್ಧಿಗೆ ಯಾವ ರೀತಿಯ ಯೋಜನೆಗಳು ಕಾರ್ಯಗತವಾಗುತ್ತವೆ ಎನ್ನುವ ನಿರೀಕ್ಷೆಯೂ ನಾಗರಿಕರಲ್ಲಿ ಮೂಡಿದೆ.
‘ಒಂದು ಜಿಲ್ಲೆ ಒಂದು ತಾಣಕ್ಕೆ ನಂದಿ ಆಯ್ಕೆ’ ಕೃಷಿ ಇಲಾಖೆಯು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಜಾರಿಗೊಳಿಸಿದೆ. ಅದೇ ರೀತಿ ಪ್ರವಾಸೋದ್ಯಮ ಇಲಾಖೆಯೂ ‘ಒಂದು ಜಿಲ್ಲೆ ಒಂದು ತಾಣ’ ಎನ್ನುವ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗೆ ಜಿಲ್ಲೆಯಲ್ಲಿ ನಂದಿಬೆಟ್ಟ ಗಿರಿಧಾಮ ಆಯ್ಕೆಯಾಗಿದೆ. ಪ್ರತಿ ಜಿಲ್ಲೆಯಲ್ಲಿಯೂ ಒಂದು ಪ್ರಮುಖ ಪ್ರವಾಸಿ ತಾಣವನ್ನು ಆಯ್ಕೆ ಮಾಡಿ ಅದನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಈ ಯೋಜನೆಯ ಉದ್ದೇಶ. ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದು ನಂದಿಗಿರಿಧಾಮಕ್ಕೆ. ಸಾಂಸ್ಕೃತಿಕ ಮನರಂಜನೆ ಸಾಹಸ ಪ್ರವಾಸೋದ್ಯಮ ಮತ್ತು ಧಾರ್ಮಿಕ ಪ್ರವಾಸೋದ್ಯಮ ಸ್ಥಳವನ್ನಾಗಿ ನಂದಿಯನ್ನು ಗುರುತಿಸಲಾಗಿದೆ. ಈ ಕಾರಣದಿಂದಲೇ ಇಲ್ಲಿಗೆ ರೋಪ್ ವೇ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಅಧಿಕಾರಿಗಳು ಸಹ ಆಗಾಗ್ಗೆ ಭೇಟಿ ನೀಡಿ ನಂದಿಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ‘ಒಂದು ಜಿಲ್ಲೆ ಒಂದು ತಾಣ’ದಡಿ ಗರಿಷ್ಠ ಪ್ರಮಾಣದಲ್ಲಿ ಗಮನ ಕೇಂದ್ರೀಕರಿಸಿ ನಂದಿ ಗಿರಿಧಾಮವನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
‘ಪ್ರವಾಸಿ ಹಬ್;
ಅಭಿವೃದ್ಧಿ ಪರ್ವ’ ‘ನಂದಿಗಿರಿಧಾಮ ಸೇರಿದಂತೆ ಚಿಕ್ಕಬಳ್ಳಾಪುರ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳು ಇವೆ. ಈ ಕಾರಣದಿಂದಲೇ ರೋಪ್ ವೇ ನಿರ್ಮಾಣಕ್ಕೆ ಸರ್ಕಾರ ಯೋಜಿಸಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ‘ಪ್ರಜಾವಾಣಿ’ಗೆ ತಿಳಿಸಿದರು. ನಂದಿಗಿರಿಧಾಮವು ಬೆಂಗಳೂರಿಗೆ ಹತ್ತಿರವಿದೆ. ಬೆಂಗಳೂರಿನ ಸುತ್ತಮುತ್ತಿನ ತಾಣಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುವ ಸ್ಥಳ ನಂದಿಗಿರಿಧಾಮ ಎನಿಸಿದೆ. ಬಸ್ ರೈಲು ಸೌಲಭ್ಯಗಳು ಇವೆ. ಈಗಾಗಲೇ ಗಿರಿಧಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.