ಗೌರಿಬಿದನೂರು (ಚಿಕ್ಕಬಳ್ಳಾಪುರ): ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾದಾಗ ನಾವಿದ್ದ ಟೆಹರಾನ್‌ನಿಂದ ಐದು ಕಿಲೋಮೀಟರ್ ದೂರದಲ್ಲೇ ಇಸ್ರೇಲ್‌ನಿಂದ ನಿರಂತರವಾಗಿ ಕ್ಷಿಪಣಿ ದಾಳಿಯಾಗುತ್ತಿತ್ತು. ಮತ್ತೆ ಜೀವಂತವಾಗಿ ತಾಯ್ನಾಡಿಗೆ ಮತ್ತು ಸ್ವಗ್ರಾಮ ಅಲೀಪುರಕ್ಕೆ ಮರಳುವ ಭರವಸೆ ಎಳ್ಳಷ್ಟೂ ಇರಲಿಲ್ಲ...
– ಇರಾನ್‌ನಿಂದ ಶನಿವಾರ ಅಲೀಪುರಕ್ಕೆ ಬಂದಿಳಿದ ಸೈಯದ್ ಮೊಹಮ್ಮದ್ ತಾಕಿ ಎಂಬ ವೈದ್ಯಕೀಯ ವಿದ್ಯಾರ್ಥಿ ಹಂಚಿಕೊಂಡ ಅನುಭವದ ಮಾತುಗಳಿವು. ಅಲೀಪುರದ ಸೈಯದ್ ತಾಕಿ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.
ಟೆಹರಾನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಅಲೀಪುರ ಗ್ರಾಮದ 11 ವಿದ್ಯಾರ್ಥಿಗಳು ಶನಿವಾರ ತಡರಾತ್ರಿ ಗ್ರಾಮಕ್ಕೆ ಬಂದರು. ಅದಕ್ಕೂ ಮೊದಲು ಮಧ್ಯಾಹ್ನ 15 ನಾಗರಿಕರು ಸುರಕ್ಷಿತವಾಗಿ ಮರಳಿದ್ದರು.
ಇರಾನ್‌ನಲ್ಲಿ ಸಿಲುಕಿದ್ದ ಸಾವಿರಾರು ಭಾರತೀಯರನ್ನು ಭಾರತ ಸರ್ಕಾರದ ಸಿಂಧೂ ಕಾರ್ಯಾಚರಣೆ ಅಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತಂದಿದೆ.
ಅಲೀಪುರದ 150ಕ್ಕೂ ಹೆಚ್ಚು ಗ್ರಾಮಸ್ಥರು ಇರಾನ್‌ನಲ್ಲಿ ಸಿಲುಕಿದ್ದಾರೆ. ಭಾನುವಾರ ರಾತ್ರಿ ಮತ್ತು ಸೋಮವಾರ ಮತ್ತಷ್ಟು ವಿದ್ಯಾರ್ಥಿಗಳು ಮತ್ತು ನಾಗರಿಕರು ಇರಾನ್‌ನಿಂದ ಗ್ರಾಮಕ್ಕೆ ಬರಲಿದ್ದಾರೆ.
ಇಸ್ರೇಲ್ ನಿರಂತರ ಕ್ಷಿಪಣಿ ದಾಳಿ ನಡೆಸುತ್ತಿರುವ ಸುದ್ದಿಯನ್ನು ಟಿ.ವಿಯಲ್ಲಿ ನೋಡಿದಾಗ ಮನೆಯಲ್ಲಿ ಎಲ್ಲರೂ ಭಯವಾಗಿತ್ತು. ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆ ತರುವುದಾಗಿ ಅಧಿಕಾರಿಗಳು ತಿಳಿಸಿದ್ದರು.– ಮಿರ್‌ರಾಜಾ ತಾಕಿ, ವಿದ್ಯಾರ್ಥಿ ತಂದೆ
ಟೆಹರಾನ್ ನಗರದ ಕೆಲವು ಬೃಹತ್ ಕಟ್ಟಡಗಳು ಕಡೆ ಕ್ಷಿಪಣಿ ದಾಳಿಯಿಂದ ಹಾನಿಗೆ ಒಳಗಾಗಿವೆ. ಅನೇಕ ಗಗನಚುಂಬಿ ಕಟ್ಟಡಗಳು ಧರೆಗೆ ಉರುಳುವುದನ್ನು ಕಣ್ಣಾರೆ ಕಂಡಿದ್ದೇವೆ. ಇಸ್ರೇಲ್ ಕ್ಷಿಪಣಿಗಳನ್ನು ಇರಾನ್ ಆಗಸದಲ್ಲೇ ಹೊಡೆದುರುಳಿಸಿದೆ. ಟೆಹರಾನ್‌ನಿಂದ ಶುಕ್ರವಾರ ಮಶಾದ್ ನಗರಕ್ಕೆ ಬಂದಾಗ ಅಲ್ಲಿಯೂ ನಿರಂತರವಾಗಿ ಕ್ಷಿಪಣಿಗಳ ದಾಳಿ ನಡೆಯುತ್ತಿತ್ತು. ಆಗಸದಲ್ಲಿ ಚಿಮ್ಮಿ ಬರುತ್ತಿದ್ದ ರಾಕೆಟ್‌ಗಳು ಪಟಾಕಿಗಳಂತೆ ಗೋಚರಿಸುತ್ತಿದ್ದವು ಎಂದು ಅನುಭವ ಹಂಚಿಕೊಂಡರು.
ಕ್ಷಿಪಣಿ ದಾಳಿ ನೋಡಿ ಆತಂಕವಾಗಿತ್ತು. ಇಂಟರ್‌ನೆಟ್ ಕಡಿತಗೊಳಿಸಲಾಗಿತ್ತು. ಇದರಿಂದ ಮನೆಯವರೊಂದಿಗೆ ಸಂಪರ್ಕ ಸಾಧಿಸಲು ಕಷ್ಟವಾಯಿತು ಎಂದರು.
ಹೋಟೆಲ್‌ನಲ್ಲಿ ಇರಿಸಿದ್ದರು
ಭಾರತೀಯ ವಿದ್ಯಾರ್ಥಿಗಳನ್ನು ವಿಮಾನ ನಿಲ್ದಾಣಕ್ಕೆ ಕರೆ ತರುವಾಗ 60 ಕಿಲೋ ಮೀಟರ್‌ಗೆ ಒಂದು ಚೆಕ್ ಪೋಸ್ಟ್ ನಿರ್ಮಿಸಿ ತಪಾಸಣೆ ಮಾಡುತ್ತಿದ್ದರು. ನಂತರ ವಿಮಾನ ನಿಲ್ದಾಣಕ್ಕೆ ಬಂದ ನಂತರ ಭಾರತೀಯ ರಾಯಭಾರ ಕಚೇರಿ 1200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಪ್ರತ್ಯೇಕ ಹೋಟೆಲ್‌ಗಳಲ್ಲಿ ಇರಿಸಿದ್ದರು ಎಂದರು.
ಅಲೀಪುರದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿತ್ತು. ಇಲ್ಲಿ ವೈ–ಫೈ ವ್ಯವಸ್ಥೆಯಿಂದ ಮನೆಯವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿತ್ತು. ಟೆಹರಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಪ್ರತಿಯೊಬ್ಬ ಭಾರತೀಯರನ್ನೂ ಸಂಪರ್ಕಿಸಿ ಎಲ್ಲಾ ಅಗತ್ಯ ಸೌಕರ್ಯ ಒದಗಿಸಿದರು ಎಂದು ಸೈಯದ್ ಮೊಹಮ್ಮದ್ ತಾಕಿ ಕೃತಜ್ಞತೆ ಸಲ್ಲಿಸಿದರು.
ಭಾರತಕ್ಕೆ ಯಾವಾಗ ಮರಳುತ್ತೇವೆ ಎಂಬ ಬಗ್ಗೆ ಯಾವುದೇ ಖಚಿತವಾಗಿ ಮಾಹಿತಿ ನೀಡುತ್ತಿರಲಿಲ್ಲ. ಆರು ತಾಸು ಮುಂಚಿತವಾಗಿ ಸಿದ್ಧವಾಗಿರುವಂತೆ ಮಾತ್ರ ತಿಳಿಸಿದ್ದರು. ಎರಡನೇ ತಂಡದಲ್ಲಿ ಭಾರತಕ್ಕೆ ಹೊರಡಲು ಸಿದ್ಧರಾಗಿ ವಿಮಾನ ನಿಲ್ದಾಣದಲ್ಲಿ ಇರುವಂತೆ ತಿಳಿಸಿದ್ದರು. ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೆವು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.