ಪ್ರಾತಿನಿಧಿಕ ಚಿತ್ರ
ಗೌರಿಬಿದನೂರು: ಮೈಕ್ರೊ ಫೈನಾನ್ಸ್‌ಗಳ ಕಿರುಕುಳಕ್ಕೆ ಬೇಸತ್ತ ತಾಲ್ಲೂಕಿನ ಎಂ.ಜಾಲಹಳ್ಳಿಯ ಮಂಜುನಾಥ್ (34) ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
‘ಮಗ ಗ್ರಾಮದಲ್ಲಿ ತಳ್ಳುವ ಗಾಡಿಯಲ್ಲಿ ಎಗ್‌ರೈಸ್ ಮಾರಾಟ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಕೆಲವು ಖಾಸಗಿ ಫೈನಾನ್ಸ್‌ಗಳಲ್ಲಿ ₹6.25ಲಕ್ಷ ಸಾಲ ಮಾಡಿದ್ದ. ಭಾನುವಾರ ಎಲ್‌ಎನ್‌ಟಿ ಫೈನಾನ್ಸ್‌ನವರು ₹10ಸಾವಿರ ಹಣದ ಕಂತು ಕಟ್ಟಲೇಬೇಕು ಎಂದು ಪಟ್ಟು ಹಿಡಿದಿದ್ದರು. ಮತ್ತೊಬ್ಬರ ಬಳಿ ಹಣ ತಂದು ಸಾಲ ಕಟ್ಟುವುದಾಗಿ ಹೇಳಿ ಇಡಗೂರು ರಸ್ತೆ ಬದಿ ಜಮೀನಿನಲ್ಲಿ ನೇಣು ಹಾಕಿಕೊಂಡಿದ್ದಾನೆ’ ಎಂದು ಮೃತಪಟ್ಟ ಮಂಜುನಾಥ್ ಅವರ ತಾಯಿ ಗಂಗರತ್ನಮ್ಮ ಹೇಳಿದ್ದಾರೆ.
ಕುಟುಂಬಸ್ಥರು ಸೋಮವಾರ ಗೌರಿಬಿದನೂರಿನ ಎಲ್‌ಎನ್‌ಟಿ ಫೈನಾನ್ಸ್ ಕಚೇರಿ ಎದುರು ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಸಿಬ್ಬಂದಿ ಕಚೇರಿಗೆ ಬೀಗ ಹಾಕಿಕೊಂಡು ಹೊರಟು ಹೋದರು. ಶವ ತಂದು ಕಚೇರಿ ಮುಂದೆ ಪ್ರತಿಭಟಿಸಲು ಮುಂದಾದರು. ಆಗ ವೃತ್ತ ನಿರೀಕ್ಷಕ ಕೆ.ಪಿ ಸತ್ಯನಾರಾಯಣ್ ಮಧ್ಯಪ್ರವೇಶಿಸಿ ಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.