
ಚಿಕ್ಕಬಳ್ಳಾಪುರ: ಅಂಬಿಗರ ಚೌಡಯ್ಯ ಅವರು 12ನೇ ಶತಮಾನದ ವಚನಕಾರರು. ನೇರ ನುಡಿಯ ನಿಜಶರಣ ಎನಿಸಿದ್ದರು ಎಂದು ಅಂಬಿಗರ ಚೌಡಯ್ಯ ಅವರನ್ನು ತಹಶೀಲ್ದಾರ್ ರಶ್ಮಿ ಬಣ್ಣಿಸಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯ ಅವರಂತ ಶಿವಶರಣರು ಅಂದಿನ ಸಮಾಜದಲ್ಲಿದ್ದ ಲಿಂಗ ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು. ಆದ್ದರಿಂದಲೇ ಇಂದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಚಾಲಕ ವೃತ್ತಿಯಿಂದ ಹಿಡಿದು ಬಾಹ್ಯಾಕಾಶ ಕ್ಷೇತ್ರದವರೆಗೆ ಮಹಿಳೆಯರು ತಮ್ಮ ಛಾಪು ಮೂಡಿಸಿದ್ದಾರೆ ಎಂದು ಹೇಳಿದರು.
‘ಶರಣರು ಉತ್ತಮ ಮೌಲ್ಯಗಳ ಬಗ್ಗೆ ತಿಳಿಸಿದರು. ಅವರ ಮೌಲ್ಯಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬಿಗ ಚೌಡಯ್ಯ ಅವರು ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಪಸರಿಸಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ಉಪನ್ಯಾಸಕ ಪ್ರಕಾಶ್ ಮಾತನಾಡಿ, ಅಂಬಿಗರ ಚೌಡಯ್ಯ ಯಾವುದೇ ವಿಷಯಗಳನ್ನು ನೇರವಾಗಿ ಚರ್ಚೆ ಮೂಲಕ ಪ್ರತಿಪಾದಿಸುತ್ತಿದ್ದರು. ಆದ್ದರಿಂದ ಅಂಬಿಗರ ಚೌಡಯ್ಯ ಅವರಿಗೆ ಬಸವಣ್ಣನವರು ಅಗ್ರ ಸ್ಥಾನ ನೀಡಿದ್ದರು ಎಂದು ಅಂಬಿಗರ ಚೌಡಯ್ಯ ಅವರ ವಚನ ಸಾಹಿತ್ಯದ ಕೊಡುಗೆಗಳು ಮತ್ತು ಅವರ ಜೀವನದ ವಿವಿಧ ಮಜಲುಗಳನ್ನು ವಿವರಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಕೆ.ಜಯರಾಮ್, ತಾಲ್ಲೂಕು ಬೆಸ್ತರ ಅಧ್ಯಕ್ಷ ಆರ್.ಎ.ರವಿಕುಮಾರ್, ಸಮುದಾಯದ ಸಂಜೀವಪ್ಪ, ಆಂಜಿನಪ್ಪ, ಮುರಳಿ, ನಾಗರಾಜು, ಜಿ.ನರಸಿಂಹಯ್ಯ, ರಾಮಚಂದ್ರಪ್ಪ, ಜಿ.ರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.