ADVERTISEMENT

ಚುನಾವಣೆ ಮೇಲೆ ಅಮಿತ್ ಶಾ ವಿಶೇಷ ಗಮನ: ಪಿ.ಮುರುಳೀಧರ ರಾವ್‌

ಚಿಕ್ಕಬಳ್ಳಾಪುರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರುಳೀಧರ ರಾವ್‌ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 12:25 IST
Last Updated 21 ನವೆಂಬರ್ 2019, 12:25 IST
ಪ್ರಚಾರ ಕಾರ್ಯದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರುಳೀಧರ ರಾವ್‌ ಮಾತನಾಡಿದರು.
ಪ್ರಚಾರ ಕಾರ್ಯದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರುಳೀಧರ ರಾವ್‌ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಬಿಜೆಪಿ ರಾಷ್ಟ್ರೀಯ ವರಿಷ್ಠರು ಕರ್ನಾಟಕದ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ವಿಶೇಷ ಗಮನ ಹರಿಸಿ, ನಿತ್ಯ ಪ್ರಚಾರದ ವರದಿ ತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರಮುಖ ನಾಯಕರೆಲ್ಲ ರಾಜ್ಯಕ್ಕೆ ಪ್ರಚಾರಕ್ಕೆ ಬರಲಿದ್ದಾರೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಪಿ.ಮುರುಳೀಧರ ರಾವ್‌ ಹೇಳಿದರು.

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ಪರವಾಗಿ ಗುರುವಾರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿದ ಅವರು, ಜಕ್ಕಲಮಡಗು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಿಜೆಪಿಗೆ ಕರ್ನಾಟಕದಲ್ಲಿ ಪಕ್ಷ ಗಟ್ಟಿಗೊಳಿಸುವುದು ಬಹು ಮುಖ್ಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸದೃಢವಾಗಿದೆ ಎಂಬ ಸಂದೇಶವನ್ನು ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತಕ್ಕೆ ಸಾರುತ್ತೇವೆ. ರಾಷ್ಟೀಯ ಏಕತೆ, ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಸಮ್ಮಿಶ್ರ ಸರ್ಕಾರ ಸ್ಥಿರವಾಗಿರಲಿಲ್ಲ. ಅದರಲ್ಲಿ ಕಲಹ, ಪರಸ್ಪರ ಕಚ್ಚಾಟಗಳು ನಡೆಯುತ್ತಿದ್ದವು. ಕೆಲವೇ ಕೆಲ ಕ್ಷೇತ್ರಗಳಿಗೆ ಮಾತ್ರ ಆದ್ಯತೆ ನೀಡಲಾಗಿತ್ತು. ಇಡೀ ರಾಜ್ಯ, ಸಮಾಜ, ಅಭಿವೃದ್ಧಿಯ ಬಗ್ಗೆ ಗಮನ ಹರಿಸಲಿಲ್ಲ. ಇದರಿಂದ ಬೇಸತ್ತ ಶಾಸಕರು ಸ್ಥಳಿಯ ಅಭಿವೃದ್ಧಿಯ ವಿಚಾರವಾಗಿ ಬಿಜೆಪಿ, ಮೋದಿ, ಯಡಿಯೂರಪ್ಪ ಅವರ ಜತೆ ಮುನ್ನಡೆಯುವ ತೀರ್ಮಾನಕ್ಕೆ ಬಂದು ಬಿಜೆಪಿ ಸೇರಿದರು. ಅವರಿಂದಾಗಿ ನಮಗೆ ಸರ್ಕಾರ ರಚಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ರಾಜ್ಯದ ಹಿತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನಾವು ಸರ್ಕಾರ ರಚಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ. ಸ್ಥಳೀಯ ಪ್ರದೇಶ ಅಭಿವೃದ್ಧಿ, ಸರ್ವರಿಗೂ ನ್ಯಾಯ, ರೈತರ ಸಬಲೀಕರಣ, ಸುಸ್ಥಿರ ಸರ್ಕಾರ ಬಿಜೆಪಿಯಿಂದ ಮಾತ್ರ ಸಾಧ್ಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಸುಧಾಕರ್ ಅವರು ಯಡಿಯೂರಪ್ಪ ಅವರಿಗೆ ಬೆಂಬಲ ನೀಡಿದ್ದಾರೆ. ವಿದ್ಯಾವಂತ, ಯೋಗ್ಯ ಅಭ್ಯರ್ಥಿಯಾಗಿರುವ ಅವರು ಗೆಲುವು ಸಾಧಿಸಲಿದ್ದಾರೆ’ ಎಂದರು.

‘ಬಿಜೆಪಿ ಬೇರುಮಟ್ಟದ ಕಾರ್ಯಕರ್ತರನ್ನು ಹೊಂದಿರುವ ಅತಿ ದೊಡ್ಡ ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ಬಂಡಾಯ, ಅಶಿಸ್ತಿಗೆ ಅವಕಾಶವಿಲ್ಲ. ಪಕ್ಷ ಕಟ್ಟಲು ಶ್ರಮಿಸಿದ ಕಾರ್ಯಕರ್ತರು, ಮುಖಂಡರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷ ಪ್ರತಿಯೊಬ್ಬರ ಬಗ್ಗೆ ಕಾಳಜಿ ಹೊಂದಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.