ಬಾಗೇಪಲ್ಲಿ: ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್ ಯೋಜನೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಸಲ್ಲಿಸುವ ಮನವಿಗೆ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಬುಧವಾರ ಸಹಿ ಸಂಗ್ರಹ ಅಭಿಯಾನ ಕೈಗೊಳ್ಳಲಾಯಿತು.
ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ಜಿಲ್ಲಾ ಅಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ ಮಾತನಾಡಿ, ‘ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಇರುವ ಐಸಿಡಿಎಸ್ ಯೋಜನೆ ಜಾರಿ ಆಗಿ 50 ವರ್ಷವೇ ಆಗಿದೆ. ಆದರೆ, ಈ ಯೋಜನೆಯನ್ನು ಸರಳೀಕರಣಗೊಳಿಸಿ, ಫಲಾನುಭವಿಗಳನ್ನು ಆಕರ್ಷಿಸುವ ಬದಲಿಗೆ, ಸಂಕೀರ್ಣಗೊಳಿಸಲಾಗಿದೆ’ ಎಂದು ಆರೋಪಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯ ನೀಡದೆ, ಮುಖಚರ್ಯೆ ಗುರುತಿಸುವ ಕ್ರಮ (ಎಫ್‍ಆರ್‌ಎಸ್) ಅಳವಡಿಸಿರುವುದರಿಂದ 2013ರ ಆಹಾರ ಭದ್ರತೆ ಕಾಯ್ದೆ ಪ್ರಕಾರ ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಎಂಬ ಆಶಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ, ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಸಬ್ಸಿಡಿ ಮತ್ತು ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳು ವಂಚಿತರಾಗಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವೂ ಪಾಲನೆಯಾಗುತ್ತಿಲ್ಲ. ಸರ್ಕಾರವು, ಎಫ್ಆರ್‌ಎಸ್ ಜಾರಿ ಮೂಲಕ ಫಲಾನುಭವಿಗಳ ಹಕ್ಕನ್ನು ನಿರಾಕರಿಸಲಾಗುತ್ತಿದೆ ಎಂದು ದೂರಿದರು.
ಎಫ್‍ಆರ್‌ಎಸ್ ಮೂಲಕ ಸಂಗ್ರಹಿಸುವ ಫಲಾನುಭವಿಗಳ ವೈಯುಕ್ತಿಕ ಮಾಹಿತಿ ಸೋರಿಕೆ ಆಗುತ್ತಿದೆ. ಇದರಿಂದ ಸೈಬರ್ ವಂಚನೆಗಳು ಹೆಚ್ಚಾಗುತ್ತಿವೆ. ಶೇ 60ರ ತನ್ನ ಪಾಲಿನ ವಂತಿಗೆಯನ್ನು ನೀಡಬೇಕಾದ ಕೇಂದ್ರ ಸರ್ಕಾರ ಎಫ್‍ಆರ್‌ಎಸ್ ನಿಬಂಧನೆ ಹಾಕುವ ಮೂಲಕ ತನ್ನ ಪಾಲಿನ ಹಣ ಕಡಿಮೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ಸಂಘದ(ಸಿಐಟಿಯು)ನ ಜಿಲ್ಲಾ ಕಾರ್ಯದರ್ಶಿ, ತಾಲ್ಲೂಕು ಅಧ್ಯಕ್ಷೆ ಕೆ.ರತ್ನಮ್ಮ ಮಾತನಾಡಿ, ‘ಎಫ್‌ಆರ್‌ಎಸ್ ಅನ್ನು ರದ್ದುಪಡಿಸಿ, ಐಸಿಡಿಎಸ್ ಅನ್ನು ಕಾಯಂ ಮಾಡಬೇಕು. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರನ್ನು ಸಿ ಮತ್ತು ಡಿ ಗುಂಪಿನ ನೌಕರರು ಎಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
2018ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಬೇಕು. ಫಲಾನುಭವಿಗಳ ಘಟಕದ ವೆಚ್ಚ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಇದೇ 21ರಂದು ಕಪ್ಪು ಪಟ್ಟಿ ಧರಿಸಿ ಕಪ್ಪು ದಿನಾಚರಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ತಾಲ್ಲೂಕು ಕಾರ್ಯದರ್ಶಿ ಕೆ.ಗೀತಾ, ವಿ.ಗಂಗರತ್ನಮ್ಮ, ಗಂಗರತ್ನ, ರಮಾದೇವಿ, ಕೆ.ಗೀತ, ಮಮತ, ಅಲುವೇಲಮ್ಮ, ರವಣಮ್ಮ, ಶಿಲ್ಪ, ಸುಶೀಲಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.