ADVERTISEMENT

ಗೌರಿಬಿದನೂರು : ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:41 IST
Last Updated 18 ಅಕ್ಟೋಬರ್ 2025, 6:41 IST
ಗೌರಿಬಿದನೂರು ತಾಲ್ಲೂಕು ಆಡಳಿತ ಸೌಧದ ಎದುರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು
ಗೌರಿಬಿದನೂರು ತಾಲ್ಲೂಕು ಆಡಳಿತ ಸೌಧದ ಎದುರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿದರು   

ಗೌರಿಬಿದನೂರು: ಅಂಗನವಾಡಿ ಕಾರ್ಯಕರ್ತೆಯರನ್ನು ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಆಡಳಿತ ಕಚೇರಿಯ ಮುಂದೆ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವಂತೆ ಶಾಲಾ ಶಿಕ್ಷಕರನ್ನು ನೇಮಿಸಿದ್ದು ಇವರಿಗೆ ₹20ಸಾವಿರ ಸಂಭಾವನೆ ನೀಡುತ್ತಿದ್ದರು ಸಹ ತಾಲ್ಲೂಕಿನ ಕೆಲವು ಶಿಕ್ಷಕರು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡಿ ಪ್ರವಾಸ ಕೈಗೊಂಡಿದ್ದಾರೆ. ಈ ಬಗ್ಗೆ ಬಿಇಒ ಅವರಿಗೆ ದೂರು ನೀಡಿದ್ದೆವು. ಈಗ ಪ್ರವಾಸದಿಂದ ಬಂದ ಶಿಕ್ಷಕರು ಕೆಲಸ ಪ್ರಾರಂಭಿಸಿದ್ದಾರೆ. ಅವರು ಸಮೀಕ್ಷೆ ಮಾಡದೇ ಇರುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಒತ್ತಡ ಹೇರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

ಗೌರವಧನ ಪಡೆಯುವ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಮಾನಸಿಕ ಹಿಂಸೆ, ದೌರ್ಜನ್ಯ ಸಹಿಸುವುದಿಲ್ಲ. ಶಿಕ್ಷಕರು ಸಮೀಕ್ಷೆಯಲ್ಲಿ ಬಿಟ್ಟಿರುವ ಮನೆಗಳನ್ನು ಇವರು ಮಾಡಬೇಕು ಎಂಬುವುದನ್ನು ಬಿಟ್ಟು ಸಹಕಾರ ನೀಡಬೇಕು. ತಾಲ್ಲೂಕು ಆಡಳಿತವಾಗಲಿ, ಶಿಕ್ಷಕರಾಗಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಸರ್ವಾಧಿಕಾರಿ ಧೋರಣೆ ನಡೆಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಅಂಗನವಾಡಿ ಕಾರ್ಯಕರ್ತೆ ಜಯಮಂಗಳ ಮಾತನಾಡಿ, ‘ನಾವು ಬೆಳಿಗ್ಗೆಯಿಂದ ಸಂಜೆವರೆಗೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಲಾಲನೆ, ಪಾಲನೆ, ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣ ಟಿಎಚ್‌ಆರ್, ಫೇಸ್‌ಕ್ಯಾಪ್ಚರ್, ಇಕೆವೈಸಿ, ಮನೆಭೇಟಿ, ತಾಯಂದಿರ ಸಭೆ, ಭಾಗ್ಯಲಕ್ಷ್ಮಿ ಯೋಜನೆ, ಮಾತೃವಂದನಾ ಯೋಜನೆ, ಪೌಷ್ಟಿಕ ಶಿಬಿರ, ಬಿಎಲ್‌ಒ ಸೇರಿದಂತೆ ಹಲವಾರು ಕಾರ್ಯಗಳಿಂದ ಮಾನಸಿಕವಾಗಿ ಬಳಲುತ್ತಿದ್ದೇವೆ. ಸಮೀಕ್ಷೆ ಕಾರ್ಯದ ಒತ್ತಡ ನಮ್ಮ ಮೇಲೆ ಹೇರಬಾರದು’ ಎಂದರು.

ತಹಶೀಲ್ದಾರ್ ಅರವಿಂದ್ ಕೆ.ಎಂ ರವರಿಗೆ ಮನವಿ ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷ್ಮಿ, ವಸಂತಲಕ್ಷ್ಮಿ, ಸುಕನ್ಯಾ, ಶಾರದಮ್ಮ, ಭಾರತಿ, ಸಲ್ಮಾ, ಜಯಲಕ್ಷ್ಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.