ADVERTISEMENT

ನಾವು ಯಾರೂ ಹಿಂದೂಗಳು ಅಲ್ಲವೇ: ಉನ್ನತ ಶಿಕ್ಷಣ ಸಚಿವ ಸುಧಾಕರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 14:05 IST
Last Updated 27 ಫೆಬ್ರುವರಿ 2025, 14:05 IST
<div class="paragraphs"><p>ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.‌ ಸುಧಾಕರ್</p></div>

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.‌ ಸುಧಾಕರ್

   

ಚಿಕ್ಕಬಳ್ಳಾಪುರ: ‘ನಾವು ಯಾರೂ ಹಿಂದೂಗಳು ಅಲ್ಲವೇ? ನಮ್ಮದೇ ಆದ ಆಚಾರ, ವಿಚಾರಗಳು ಇರುವುದಿಲ್ಲವೇ? ಕಾಂಗ್ರೆಸ್ ಹಿಂದೂ ಧರ್ಮದ ವಿರುದ್ಧ ಇಲ್ಲವಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.‌ ಸುಧಾಕರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‌ಕಾಂಗ್ರೆಸ್ ಪಕ್ಷ ಮತ್ತು ನಾಯಕರಿಗೆ ಸರ್ವಧರ್ಮಗಳ ಬಗ್ಗೆ ಗೌರವ ಇದೆ. ಪಕ್ಷವು ಜಾತ್ಯತೀತ ನೆಲೆಗಟ್ಟಿನಲ್ಲಿ ನಡೆಯುತ್ತಿದೆ. ಧರ್ಮದ ಹೆಸರಿನಲ್ಲಿ ಮತ ಪಡೆಯುವವರಿಗೆ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಿರುವುದು ಬೇರೆ ರೀತಿಯಲ್ಲಿ ಕಾಣುತ್ತದೆ ಎಂದರು.

ADVERTISEMENT

ಕುಂಭಮೇಳ 144 ವರ್ಷದಿಂದ ನಡೆಯುತ್ತಿದೆ. ಈ ಮೇಳ ಬಿಜೆಪಿ ಅಸ್ತಿತ್ವಕ್ಕೆ ಬಂದ ಮೇಲೆ ಆಯಿತೇ? ಬೇರೆ ಸರ್ಕಾರಗಳು ಇದ್ದಾಗ ಕುಂಭ ಮೇಳ ನಡೆಯಲಿಲ್ಲವೇ? ಬಿಜೆಪಿಯವರು ‌ಈ ಕಾರ್ಯಕ್ರಮಗಳನ್ನು ಹೈಜಾಕ್ ಮಾಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ ಮತ್ತು ನಾಯಕರು ಇಂತಹ ಇಂತಹ ಜಾತಿ, ಧರ್ಮಕ್ಕೆ ಸೀಮಿತ ಎಂದು ಬಿಜೆಪಿಯವರು ಬ್ರಾಂಡ್ ಮಾಡಲು ಮುಂದಾಗಿದ್ದರು. ಆದರೆ ಇವರೇ (ಕಾಂಗ್ರೆಸ್‌) ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಯಾರೂ ಸೊಪ್ಪು ಹಾಕುವುದಿಲ್ಲ ಎನ್ನುವ ಭಯದಿಂದ ಬಾಯಿಗೆ ಬಂದ ರೀತಿಯಲ್ಲಿ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ ಎಂದರು.

ನಮ್ಮ ಪಕ್ಷದ ಅಧ್ಯಕ್ಷರ ಹೆಸರು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಅಂದರೆ ಶಿವ. ನಮ್ಮ ಧರ್ಮದ ಆಚಾರ ವಿಚಾರಗಳ ಬಗ್ಗೆ ಗೌರವವಿದೆ. ಅದು ವೈಯಕ್ತಿಕ. ಅದಕ್ಕೆ ಯಾರ ನಿರ್ಬಂಧವೂ ಇಲ್ಲ. ನಾವು ಹಾಕುವ ಬಲೆಗೆ ಕಾಂಗ್ರೆಸ್ ನಾಯಕರು ಸಿಕ್ಕಿಹಾಕಿಕೊಳ್ಳುವರು ಎನ್ನುವ ಭ್ರಮೆಯಲ್ಲಿ ಬಿಜೆಪಿಯವರು ಇದ್ದಾರೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಭಾಗಿಯಾದ ಕುರಿತು ಚರ್ಚೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.